ಮುಂಡಗೋಡ:ಮುಂಡಗೋಡ ನ್ಯಾಯಾಲಯವನ್ನು ಉಚ್ಚ ನ್ಯಾಯಾಲಯ ಮುಂಗಳೂರು ಪೀಠದ ಅಧಿಕಾರ ವ್ಯಾಪ್ತಿಗೆ ಸೇರಿಸದೇ ಈಗ ಇದ್ದಂತಹ ಧಾರವಾಡದ ಉಚ್ಚ ನ್ಯಾಯಾಲಯದ ಪೀಠದ ಅಧಿಕಾರ ವ್ಯಾಪ್ತಿಯಲ್ಲಿ ಮುಂದುವರಿಸುವಂತೆ ಒತ್ತಾಯಿಸಿ ತಾಲೂಕು ವಕೀಲರ ಸಂಘದವರು ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಸೋಮವಾರ ಮನವಿ ಸಲ್ಲಿಸಿದರು.
ಉಚ್ಚ ನ್ಯಾಯಾಲಯದ ಪೀಠವನ್ನು ಮಂಗಳೂರಿನಲ್ಲಿ ಸ್ಥಾಪಿಸಲು ಇಚ್ಚಿಸಿದ್ದು ಅದಕ್ಕೆ ಉತ್ತರಕನ್ನಡ ಜಿಲ್ಲೆಯನ್ನು ಸಹ ಅದರ ಅಧಿಕಾರ ವ್ಯಾಪ್ತಿಗೆ ಒಳಪಡಿಸಲು ಇಚ್ಚಿಸಿದ್ದು ಇದರಿಂದ ಉತ್ತರಕನ್ನಡ ಜಿಲ್ಲೆಯ ಕಕ್ಷಿದಾರರಿಗೆ, ವಕೀಲರಿಗೆ ಬಹಳ ತೊಂದರೆಯಾಗುತ್ತದೆ.
ಮಂಗಳೂರಿನಲ್ಲಿ ಉಚ್ಚ ನ್ಯಾಯಾಲಯದ ಪೀಠವನ್ನು ಸ್ಥಾಪಿಸಿ ಅದರ ಅಧಿಕಾರ ವ್ಯಾಪ್ತಿಗೆ ಮುಂಡಗೋಡ ನ್ಯಾಯಾಲಯವನ್ನು ನೀಡಿದಲ್ಲಿ ಮಂಗಳೂರು ಮುಂಡಗೋಡದಿಂದ ಸುಮಾರು 350 ಕಿ.ಮೀ. ರಷ್ಟು ದೂರವಾಗುತ್ತದೆ. ಸಾರಿಗೆಯ ಸೌಕರ್ಯವು ಸಮರ್ಪಕವಾಗಿ ಇರುವುದಿಲ್ಲ. ಮುಂಡಗೋಡ ತಾಲೂಕಿನ ಜನರು ಬಹಳ ಬಡವರಿದ್ದು ಇಲ್ಲಿಂದ ಮಂಗಳೂರಿಗೆ ಹೋಗಿ ಪ್ರಕರಣಲ್ಲಿ ನ್ಯಾಯ ಕೇಳುವುದು ಬಹಳ ತೊಂದರೆ ಆಗುತ್ತದೆ.
ಮುಂಡಗೋಡದಿಂದ ಧಾರವಾಡದ ಉಚ್ಚ ನ್ಯಾಯಾಲಯದ ಪೀಠವು ಕೇವಲ 75 ಕಿ.ಮೀ ದೂರದಲ್ಲಿ ಇರುತ್ತದೆ. ನಮ್ಮ ಜಿಲ್ಲೆಯ ಹಳಿಯಾಳದಿಂದ ಕೇವಲ 20 ಕಿ.ಮೀ. ಅಂತರದಲ್ಲಿ ಧಾರವಾಡ ಪೀಠ ಇರುತ್ತದೆ. ಅದೂ ಅಲ್ಲದೇ ಘಟ್ಟ ಹತ್ತಿ ಇಳಿದು ಹೋಗಿ ಬಂದು ಮಾಡಬೇಕಾಗುತ್ತದೆ.
ನ್ಯಾಯ ಕೇಳುವ ಕಕ್ಷಿದಾರರಿಗೆ ಇದರಿಂದ ತುಂಬಾ ತೊಂದರೆ ಆಗುತ್ತದೆ 2 ಅಥವಾ 3 ದಿನ ಅಲ್ಲಿಯೇ ಉಳಿದು ಬರಬೇಕಾಗುತ್ತದೆ. ಈ ಎಲ್ಲಾ ಖರ್ಚುಗಳನ್ನು ಭರಿಸುವ ಶಕ್ತಿ ಇಲ್ಲಿಯ ಕಕ್ಷಿದಾರರಿಗೆ ಇರುವುದಿಲ್ಲ. ಇಲ್ಲಿಯ ವಕೀಲರು ಸಹ ಅಷ್ಟು ದೂರ ಹೋಗಿ ಬಂದು ಮಾಡುವುದು ಕಷ್ಟಕರವಾಗಿರುತ್ತದೆ. ಉತ್ತರ ಕನ್ನಡ ಜಿಲ್ಲೆಗೆ ಬಹಳ ಅನುಕೂಲವಾದ ಪೀಠ ಧಾರವಾಡ. ಮಂಗಳೂರು ಪೀಠಕ್ಕೆ ಸೇರ್ಪಡೆ ಮಾಡಲು ನಮ್ಮ ವಕೀಲರ ಸಂಘದ ತಕರಾರು ಇರುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ವೇಳೆ ವಕೀಲರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಸದಸ್ಯರು ಇದ್ದರು.
ವರದಿಗಾರರು: ಬಸಯ್ಯ ತೋಟಯ್ಯನವರ
