ನವದೆಹಲಿ: ಕರ್ನಾಟಕ ಕಾಂಗ್ರೆಸ್‌ನಲ್ಲಿನ ನಾಯಕತ್ವ ಬದಲಾವಣೆ ಮತ್ತು ಅಧಿಕಾರ ಹಂಚಿಕೆಯ ಕುರಿತಾದ ಗೊಂದಲಗಳಿಗೆ ಶೀಘ್ರದಲ್ಲೇ ತೆರೆ ಬೀಳುವ ಲಕ್ಷಣಗಳು ಗೋಚರಿಸುತ್ತಿವೆ. ಲೋಕೋಪಯೋಗಿ ಸಚಿವ ಶ್ರೀ ಸತೀಶ್ ಜಾರಕಿಹೊಳಿ ಅವರು ಇಂದು ದೆಹಲಿಯ ರಾಜಾಜಿ ಮಾರ್ಗದಲ್ಲಿರುವ ಎ.ಐ.ಸಿ.ಸಿ ಅಧ್ಯಕ್ಷ ಸನ್ಮಾನ್ಯ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸಕ್ಕೆ ಭೇಟಿ ನೀಡಿ ಸುದೀರ್ಘ ಚರ್ಚೆ ನಡೆಸಿದರು
ಗೊಂದಲ ನಿವಾರಣೆಗೆ ಹೈಕಮಾಂಡ್ ಭರವಸೆ:
ಭೇಟಿಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ ಅವರು, “ರಾಜ್ಯದಲ್ಲಿರುವ ರಾಜಕೀಯ ಗೊಂದಲಗಳನ್ನು ಬಗೆಹರಿಸುವಂತೆ ನಾವು ಎ.ಐ.ಸಿ.ಸಿ ಅಧ್ಯಕ್ಷರಿಗೆ ಮನವಿ ಮಾಡಿದ್ದೇವೆ. ಇದಕ್ಕೆ ಪ್ರತಿಕ್ರಿಯಿಸಿರುವ ಖರ್ಗೆ ಅವರು, ನಾಯಕತ್ವದ ವಿಷಯದ ಕುರಿತು ಹೈಕಮಾಂಡ್ ಈಗಾಗಲೇ ಒಂದು ನಿರ್ಧಾರಕ್ಕೆ ಬಂದಿದ್ದು, ಶೀಘ್ರದಲ್ಲೇ ಗೊಂದಲಗಳಿಗೆ ಪರಿಹಾರ ಸಿಗಲಿದೆ ಎಂದು ಭರವಸೆ ನೀಡಿದ್ದಾರೆ” ಎಂದು ತಿಳಿಸಿದರು
ಶಾಸಕರ ತಂಡದಿಂದ ಮನವಿ:
ಈ ಮಹತ್ವದ ಸಭೆಯಲ್ಲಿ ಸಚಿವರ ಜೊತೆ ಮಾಜಿ ಸಚಿವರಾದ ಶ್ರೀ ಕೆ.ಎನ್. ರಾಜಣ್ಣ, ಶಾಸಕರಾದ ಶ್ರೀ ಎನ್.ಎಚ್. ಕೋನರೆಡ್ಡಿ ಹಾಗೂ ಶ್ರೀ ಕೆ.ಎಸ್. ಬಸವಂತಪ್ಪ ಅವರು ಉಪಸ್ಥಿತರಿದ್ದರು. ರಾಜ್ಯದ ಪ್ರಚಲಿತ ವಿದ್ಯಮಾನಗಳು, ಪಕ್ಷದ ಸಂಘಟನೆ ಹಾಗೂ ಅಭಿವೃದ್ಧಿ ಕಾರ್ಯಗಳ ಕುರಿತು ತಂಡವು ಹೈಕಮಾಂಡ್ ನಾಯಕರೊಂದಿಗೆ ಮಾಹಿತಿ ಹಂಚಿಕೊಂಡಿತು
ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರ ನಡುವಿನ ಅಧಿಕಾರ ಹಂಚಿಕೆಯ ವಿಷಯವು ಸದ್ಯ ರಾಜ್ಯ ರಾಜಕಾರಣದ ಕೇಂದ್ರ ಬಿಂದುವಾಗಿದ್ದು, ಸಚಿವ ಸತೀಶ್ ಜಾರಕಿಹೊಳಿ ಅವರ ಈ ದೆಹಲಿ ಭೇಟಿಯು ತೀವ್ರ ಕುತೂಹಲ ಕೆರಳಿಸಿದೆ.
