Wednesday, July 8, 2026
Homeಜಿಲ್ಲಾ ಸುದ್ದಿಗಳುದಶಕಗಳ ಬಸ್‌ ಸಂಚಾರದ ಕನಸು ನನಸು: ರೈತ ಸಂಘ ಹಾಗೂ ರಾಜ್ಯ ಬುಡಕಟ್ಟು ಜನಾಂಗ ಸಂರಕ್ಷಣಾ...

ದಶಕಗಳ ಬಸ್‌ ಸಂಚಾರದ ಕನಸು ನನಸು: ರೈತ ಸಂಘ ಹಾಗೂ ರಾಜ್ಯ ಬುಡಕಟ್ಟು ಜನಾಂಗ ಸಂರಕ್ಷಣಾ ಸಮಿತಿ ಹೋರಾಟಕ್ಕೆ ಸಂದ ಜಯ!

ಲಿಂಗಸೂಗೂರು: ಸ್ವಾತಂತ್ರ್ಯ ಬಂದು ಏಳು ದಶಕಗಳ ಕಳೆದರೂ ಸಾರಿಗೆ ಸಂಪರ್ಕ ಕಾಣದಿದ್ದ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ದೇವರಗಡ್ಡಿ ಗ್ರಾಮಕ್ಕೆ ಇಂದು ಮೊದಲ ಬಾರಿಗೆ ಬಸ್‌ ಸಂಚಾರ ಆರಂಭವಾಗುವ ಮೂಲಕ ಹೊಸ ಇತಿಹಾಸ ಸೃಷ್ಟಿಯಾಗಿದೆ. ರೈತ ಸಂಘ ಹಾಗೂ ರಾಜ್ಯ ಬುಡಕಟ್ಟು ಜನಾಂಗ ಸಂರಕ್ಷಣಾ ಸಮಿತಿಯ ಸತತ ಹೋರಾಟದ ಫಲವಾಗಿ ಗ್ರಾಮಸ್ಥರ ಬಹುದಿನಗಳ ಬೇಡಿಕೆ ಈಡೇರಿದೆ.

ಜಂಟಿ ಹೋರಾಟಕ್ಕೆ ಸಿಕ್ಕ ಪ್ರತಿಫಲ:
ಅತೀ ಹೆಚ್ಚು ಎಸ್‌ಟಿ (ಬುಡಕಟ್ಟು) ಸಮುದಾಯದ ಜನರಿರುವ ಈ ಗ್ರಾಮಕ್ಕೆ ಸಾರಿಗೆ ಸೌಲಭ್ಯ ಒದಗಿಸುವಂತೆ ರೈತ ಸಂಘದ ಅಧ್ಯಕ್ಷರಾದ ಗದ್ದೆಪ್ಪ ನಾಗಬೆನಾಳ, ಸಾಮಾಜಿಕ ಹೋರಾಟಗಾರ STPC ರಾಜ್ಯಾಧ್ಯಕ್ಷರಾದ ಅಮರೇಶಣ್ಣ ಕಾಮನಕೇರಿ, ರಾಯಚೂರು ಜಿಲ್ಲಾ ರೈತ ಸಂಘದ ಅಧ್ಯಕ್ಷ ಶಿವಪುತ್ರಗೌಡ ನಂದಿಹಾಳ ಹಾಗೂ ರಾಜ್ಯ ಬುಡಕಟ್ಟು ಜನಾಂಗ ಸಂರಕ್ಷಣಾ ಸಮಿತಿಯ ಪದಾಧಿಕಾರಿಗಳು ನಿರಂತರವಾಗಿ ಒತ್ತಾಯಿಸಿದ್ದರು. ಈ ಸಂಘಟಿತ ಹೋರಾಟಕ್ಕೆ ಮಣಿದ ಸಾರಿಗೆ ಇಲಾಖೆ ಬಸ್‌ ಸಂಚಾರಕ್ಕೆ ಚಾಲನೆ ನೀಡಿದೆ.

ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಸನ್ಮಾನ:
ವಿದ್ಯಾರ್ಥಿನಿಯರ ಶಿಕ್ಷಣದ ಹಿತದೃಷ್ಟಿಯಿಂದ ತಕ್ಷಣ ಸ್ಪಂದಿಸಿ ಬಸ್‌ ವ್ಯವಸ್ಥೆ ಮಾಡಿದ ಲಿಂಗಸೂಗೂರು ಬಸ್‌ ಡಿಪೋ ಮ್ಯಾನೇಜರ್ ಪ್ರಕಾಶ ದೊಡ್ಡಮನಿ ಹಾಗೂ ಸಿಬ್ಬಂದಿ ಮ್ಯಾನೇಜರ್ ಮಹರೂದ್ರಪ್ಪ ಅವರ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಗ್ರಾಮಕ್ಕೆ ಮೊದಲ ಬಾರಿ ಬಸ್‌ ಹೊತ್ತು ತಂದ ಚಾಲಕ ಬಸಪ್ಪ ಮತ್ತು ನಿರ್ವಾಹಕ (ಕಂಡಕ್ಟರ್) ಚನ್ನಬಸವ ಅವರನ್ನು ಗ್ರಾಮಸ್ಥರ ವತಿಯಿಂದ ಅತ್ಯಂತ ಸಂಭ್ರಮದಿಂದ ಸನ್ಮಾನಿಸಲಾಯಿತು.

ಸಂಭ್ರಮಿಸಿದ ಗ್ರಾಮಸ್ಥರು:
ಗ್ರಾಮದ ಪ್ರಮುಖರಾದ ಅಮರೇಶ ಪೂಜಾರಿ, ಭೀಮಣ್ಣ ಪೂಜಾರಿ,ಸಂಗನಗೌಡ ಮಾಲಿಪಾಟೀಲ್,ರೈತ ಸಂಘದ ಮುಖಂಡರಾದ ಹನುಮಗೌಡ,ಸಾಯಬವಗೌಡ, ಬಸಲಿಂಗಪ್ಪ ನಾಗರಬೆಟ್ಟ,ಮಂಜುನಾಥ ಚಿತ್ತಾಪುರ,ಹನುಮಂತ ವಡಿಗೇರಿ,ಗದ್ದೇಪ್ಪ ಕಲ್ಲೂರಿ,ಲಕ್ಕಪ್ಪ ಬೈಲಗುಡ್ಡ ,ಸಂಗಪ್ಪ ಜಂಜಿಗಡ್ಡಿ, ಸಿದ್ದಪ್ಪ ,ಶರಣಯ್ಯ, ಬಸನಗೌಡ,ಬಸನವಗೌಡ ಚಿತ್ತಾಪುರ, ಯಮನೂರ, ಅಮರಪ್ಪ ಗುರಿಕಾರ,ಸೇರಿದಂತೆ ಊರಿನ ಹಿರಿಯರು ಬಸ್ಸಿಗೆ ಪೂಜೆ ಸಲ್ಲಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಬಸ್‌ ಸೌಲಭ್ಯದಿಂದಾಗಿ ಇನ್ನು ಮುಂದೆ ಗ್ರಾಮದ ವಿದ್ಯಾರ್ಥಿನಿಯರು ಕಿಲೋಮೀಟರ್‌ ಗಟ್ಟಲೆ ನಡೆಯುವುದು ತಪ್ಪಿದಂತಾಗಿದೆ

ಹೆಚ್ಚಿನ ಸುದ್ದಿ