ಚಿಂಚೋಳಿ: ತಾಲೂಕು ಕೋಲಿ,ಕಬ್ಬಲಿಗ ಸಮಾಜ ಸದಸ್ಯತ್ವ ನೋಂದಣಿ ಅಭಿಯಾನ ಸಮಿತಿಯಿಂದ ಭಾನುವಾರ ಚಿಂಚೋಳಿ ಪಟ್ಟಣದ ಹನುಮಾನನಗರದಲ್ಲಿರುವ ಶ್ರೀ ಅಂಬಿಗರ ಚೌಡಯ್ಯ ಭವನದಲ್ಲಿ ಸದಸ್ಯತ್ವ ನೋಂದಣಿ ಅಭಿಯಾನ ಸಮಾರಂಭ ನಡೆಯಿತು. ಕೋಲಿ ಸಮಾಜ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಯಪ್ಪ ಚಾಪಲ್ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಸಮಾಜದ ರಾಜ್ಯ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಆವುಂಟಿ ಮಾತನಾಡಿ, ಚಿಂಚೋಳಿ ತಾಲೂಕಿನ ಪ್ರತಿಯೊಂದು ಗ್ರಾಮದಲ್ಲಿರುವ ಕೋಲಿ,ಕಬ್ಬಲಿಗ ಸಮಾಜದ ಬಾಂಧವರು ಸಂಘಟಿತರಾಗಿ ಸಮಾಜದ ಬಲವರ್ಧನೆಗೆ ಮುಂದಾಗಬೇಕು ಎಂದು ಕರೆ ನೀಡಿದರು. ಸಮಾಜದ ತಾಲೂಕು ಸಮಿತಿಗೆ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ಆಯ್ಕೆ ಮಾಡುವ ಉದ್ದೇಶದಿಂದ ಸದಸ್ಯತ್ವ ನೋಂದಣಿ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಎಲ್ಲಾ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ಪಡೆಯುವಂತೆ ಮನವಿ ಮಾಡಿದರು.
ಸದಸ್ಯತ್ವ ಹಾಗೂ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸುವ ಸಲುವಾಗಿ ಸಮಾಜದ ಸರ್ಕಾರಿ ನೌಕರರನ್ನು ನೋಂದಣಿ ಅಧಿಕಾರಿಗಳಾಗಿ ನೇಮಕ ಮಾಡಲಾಗಿದೆ ಎಂದು ತಿಳಿಸಿದರು. ಸದಸ್ಯತ್ವ ಪಡೆದವರಿಗೆ ಮಾತ್ರ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಸ್ಥಾನಗಳಿಗೆ ಸ್ಪರ್ಧಿಸುವ ಹಾಗೂ ಮತದಾನ ಮಾಡುವ ಅವಕಾಶ ಇರಲಿದೆ ಎಂದು ಹೇಳಿದರು.
ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ 2 ರಿಂದ 3 ಪ್ರಮುಖರನ್ನು ಜವಾಬ್ದಾರರನ್ನಾಗಿ ನೇಮಿಸಿ ಸದಸ್ಯತ್ವ ಅರ್ಜಿಗಳ ಪುಸ್ತಕಗಳನ್ನು ವಿತರಿಸಲಾಗಿದೆ. ಯುವಕರು, ಮಹಿಳೆಯರು, ವಿದ್ಯಾರ್ಥಿಗಳು ಹಾಗೂ ಸಮಾಜದ ಸರ್ಕಾರಿ ನೌಕರರು ಸೇರಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮೇ 31ರೊಳಗೆ ಸದಸ್ಯತ್ವ ಪಡೆಯುವಂತೆ ಮನವಿ ಮಾಡಲಾಯಿತು.
ಸದಸ್ಯತ್ವ ಅರ್ಜಿಗಳು ಲಭ್ಯವಾಗದಿದ್ದಲ್ಲಿ ಚಂದಾಪೂರದ ಶ್ರೀ ಅಂಬಿಗರ ಚೌಡಯ್ಯ ಭವನದಲ್ಲಿರುವ ಸಮಾಜದ ಕಚೇರಿಯಲ್ಲಿ ಅರ್ಜಿ ಪಡೆದು ಅಗತ್ಯ ದಾಖಲೆಗಳೊಂದಿಗೆ ₹500 ನೋಂದಣಿ ಶುಲ್ಕ ಪಾವತಿಸಿ ರಸೀದಿ ಪಡೆಯಬಹುದು ಎಂದು ತಿಳಿಸಿದರು.
ಹೆಚ್ಚಿನ ಮಾಹಿತಿಗಾಗಿ ತಾಲೂಕು ಕೋಲಿ ಸಮಾಜ ನೌಕರರ ಸಂಘದ ಅಧ್ಯಕ್ಷ ಜಯಪ್ಪ ಚಾಪಲ್, ಪ್ರಥಮ ದರ್ಜೆ ಸಹಾಯಕ ಶಿವಕುಮಾರ ಮ್ಯಾಕಲ್ ಹಾಗೂ ಶಿಕ್ಷಕರಾದ ಅನೀಲಕುಮಾರ ಅವರನ್ನು ಸಂಪರ್ಕಿಸಲು ತಿಳಿಸಲಾಗಿದೆ.
ಕಾರ್ಯಕ್ರಮದಲ್ಲಿ ಅನೀಲಕುಮಾರ ಜಮಾದಾರ ಹುಡದಳ್ಳಿ, ಶರಣು ನಾಟಿಕಾರ, ಗುಂಡು ಅವರಾದಿ, ಕಾಶಿನಾಥ ನಾಟಿಕಾರ, ದೌಲಪ್ಪ ಸುಣಗಾರ, ಮಹೇಶ್ ಘಾಲಿ, ಚಂದ್ರಶೇಖರ ಪೋಲಕಪಳ್ಳಿ, ನಾಮದೇವ ಪಾಟೀಲ್, ಜಗನ್ನಾಥ ಲೊಡ್ಡಾ, ಡಾ. ಬಸವರಾಜ ತಳವಾರ ಸೇರಿದಂತೆ ವಿವಿಧ ಗ್ರಾಮಗಳ ಸಮಾಜದ ಮುಖಂಡರು ಹಾಗೂ ಬಾಂಧವರು ಭಾಗವಹಿಸಿದ್ದರು.
