ಬೆಂಗಳೂರು: ಸಿಎಂ ಸಿದ್ದರಾಮಯ್ಯನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಾಗುತ್ತೆ ಅನ್ನೋ ಮಾತು ಕೇಳಿ ಬಂದಿದ್ದವು. ಲೋಕಸಭೆ ಚುನಾವಣೆ ಬಳಿಕ ಸಂಪುಟದಲ್ಲಿ ಹಲವು ಬದಲಾವಣೆಗಳು ಆಗುತ್ತವೆ ಅಂತಾನೂ ಹೇಳಲಾಗ್ತಿತ್ತು.
ಇದೀಗ ಸಿದ್ದರಾಮಯ್ಯ ಸಂಪುಟಕ್ಕೆ ಶೀಘ್ರದಲ್ಲೇ ಸರ್ಜರಿ ನಡೆಯೋ ಸಾಧ್ಯತೆ ಇದ್ದು, ಸಂಪುಟ ಸರ್ಜರಿಗೆ ಮುಹೂರ್ತ ಫಿಕ್ಸ್ ಆಗಿದೆ ಎನ್ನಲಾಗಿದೆ. ಸಿದ್ದು ಸಂಪುಟ ಸರ್ಜರಿಗೆ ಕಾಂಗ್ರೆಸ್ ಹೈಕಮಾಂಡ್ ಮುಹೂರ್ತ ಇಟ್ಟಿದೆ ಅಂತ ಹೇಳಲಾಗುತ್ತಿದೆ. ಐವರು ಹಾಲಿ ಸಚಿವರನ್ನು ಸಂಪುಟದಿಂದ ಕೈಬಿಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಐವರು ಸಚಿವರಿಗೆ ಸಂಪುಟದಿಂದ ಕೊಕ್
ಸಿದ್ದರಾಮಯ್ಯ ಸಂಪುಟದಿಂದ ಹಾಲಿ ಐವರು ಸಚಿವರಿಗೆ ಕೊಕ್ ನೀಡಲು ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ ಮಾಡಿದೆ ಎನ್ನಲಾಗಿದೆ. ಸಚಿವರ ಕಾರ್ಯವೈಖರಿ, ಸಂಘಟನೆಯ ಜವಾಬ್ದಾರಿಗಳನ್ನು ಮಾನದಂಡವಾಗಿಟ್ಟುಕೊಂಡು ಕಾಂಗ್ರೆಸ್ ಹೈಕಮಾಂಡ್ ಕೆಲ ಸಚಿವರ ಲಿಸ್ಟ್ ರೆಡಿ ಮಾಡಿದ್ಯಂತೆ. ಈ ಮಾನದಂಡದ ಪ್ರಕಾರ ಈಗಾಗಲೇ ಸಂಪುಟದಲ್ಲಿರುವ ಕೆಲ ಹಾಲಿ ಸಚಿವರನ್ನು ಕೈಬಿಡಲು ಸೂಚನೆ ನೀಡಲಾಗಿದ್ಯಂತೆ.
ಯಾರೆಲ್ಲ ಕಳೆದುಕೊಳ್ತಾರೆ ಸಚಿವ ಸ್ಥಾನ?
ಹಾಲಿ ಸಿದ್ದು ಸಂಪುಟದಲ್ಲಿರುವ ಐವರು ಸಚಿವರನ್ನು ಮಂತ್ರಿ ಸ್ಥಾನದಿಂದ ತೆಗೆಯಲು ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ ಮಾಡಿದೆ ಎನ್ನಲಾಗಿದೆ. ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್, ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ, ಪೌರಾಡಳಿತ ಮತ್ತು ಹಜ್ ಖಾತೆ ಸಚಿವ ರಹೀಂ ಖಾನ್ ಹಾಗೂ ಪೌರಾಡಳಿತ ಸಚಿವ ಕೆಎನ್ ರಾಜಣ್ಣಗೆ ಸಂಪುಟ ಪುನಾರಚನೆ ವೇಳೆ ಕೊಕ್ ಕೊಡುವ ಸಾಧ್ಯತೆ ಇದೆ ಅಂತ ಮೂಲಗಳು ತಿಳಿಸಿವೆ.
ಸಚಿವ ಸಂಪುಟ ಪುನಾರಚನೆ ಸುಳಿವು ಕೊಟ್ಟ ಲಕ್ಷ್ಮಿ ಹೆಬ್ಬಾಳ್ಕರ್
ಈ ಎಲ್ಲಾ ಬೆಳವಣಿಗೆಗಳ ನಡುವೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸಚಿವ ಸಂಪುಟ ಪುನಾರಚನೆಯ ಸುಳಿವು ನೀಡಿದ್ದಾರೆ. ಶಿವಮೊಗ್ಗದ ಭದ್ರಾವತಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಇನ್ನು ಆರು ತಿಂಗಳಲ್ಲಿ ಸಚಿವ ಸಂಪುಟ ಪುನಾರಾರಚನೆ ಆಗಲಿದೆ ಅಂತ ಹೇಳಿದ್ದಾರೆ.
ಭದ್ರಾವತಿ ಶಾಸಕ ಸಂಗಮೇಶ್‌ಗೆ ಸಚಿವ ಸ್ಥಾನ?
ಇನ್ನು 6 ತಿಂಗಳಲ್ಲಿ ಸಚಿವ ಸಂಪುಟ ಪುನಾರಚನೆ ಆಗಲಿದೆ. ಆ ಸಂದರ್ಭದಲ್ಲಿ ಭದ್ರಾವತಿಯ ಶಾಸಕ ಸಂಗಮೇಶ್ ಅವರಿಗೆ ಸಚಿವ ಸ್ಥಾನ ಸಿಗಲಿದೆ ಅಂತ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ರು. ಸಂಪುಟ ಪುನಾರಚನೆಯ ಸಂದರ್ಭದಲ್ಲಿ ಸಂಗಮೇಶ್ ಅವರನ್ನು ಹೈಕಮಾಂಡ್ ಪರಿಗಣಿಸಲಿದೆ ಅಂತ ಹೇಳಿದ್ರು.
ಸಚಿವ ಸ್ಥಾನ ತ್ಯಾಗದ ಸುಳಿವು ಕೊಟ್ರಾ ಲಕ್ಷ್ಮಿ ಹೆಬ್ಬಾಳ್ಕರ್?
ಭದ್ರಾವತಿಯ ಶಾಸಕ ಬಿ.ಕೆ. ಸಂಗಮೇಶ್ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಕೋರಿದ ಸ್ವಾಮೀಜಿಯೊಬ್ಬರು ಹೇಳಿದ್ರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಲಕ್ಷ್ಮಿ ಹೆಬ್ಬಾಳ್ಕರ್, ನಾನಾಗಲಿ ಅಥವಾ ಸಚಿವ ಮಧು ಬಂಗಾರಪ್ಪ ಆಗಲಿ ಸಚಿವ ಸ್ಥಾನ ಬಿಟ್ಟು ಕೊಡಬೇಕಾಗುತ್ತದೆಯೋ ಏನು ಎಂದು ಮಾರ್ಮಿಕವಾಗಿ ಹೇಳಿದ್ರು.
ತರೀಕೆರೆ ಶಾಸಕರಿಗೂ ಸಚಿವ ಸ್ಥಾನ ಸಿಗಲಿದೆ
ಜೊತೆಗೆ ಚಿಕ್ಕಮಗಳೂರಿನ ತರೆಕೆರೆಯ ಶಾಸಕ ಶ್ರೀನಿವಾಸಗೂ ಸಚಿವ ಸ್ಥಾನ ಸಿಗಲಿ ಎಂದು ಹಾರೈಸುತ್ತೇನೆ ಅಂತ ಹೇಳಿದ್ರು. ಈ ಮೂಲಕ ಸಾರ್ವಜನಿಕ ವೇದಿಕೆಯ ಕಾರ್ಯಕ್ರಮದಲ್ಲಿ ಸಂಪುಟ ಪುನರಾರಚನೆಯ ಬಗ್ಗೆ ಲಕ್ಷ್ಮಿ ಹೆಬ್ಬಾಳ್ಕರ್ ಸುಳಿವು ನೀಡಿದ್ರು.