Friday, April 10, 2026
Homeಜಿಲ್ಲಾ ಸುದ್ದಿಗಳುಕೃಷಿ ಭೂಮಿಯಲ್ಲಿ ಅಕ್ರಮ ಮಣ್ಣು ಗಣಿಗಾರಿಕೆ ದಂಡ ವಿಧಿಸಿದ ತಹಶೀಲ್ದಾರ್..!

ಕೃಷಿ ಭೂಮಿಯಲ್ಲಿ ಅಕ್ರಮ ಮಣ್ಣು ಗಣಿಗಾರಿಕೆ ದಂಡ ವಿಧಿಸಿದ ತಹಶೀಲ್ದಾರ್..!

​ರಾಣೆಬೆನ್ನೂರು: ಕೃಷಿ ಉದ್ದೇಶಕ್ಕಾಗಿ ಸರ್ಕಾರದಿಂದ ಮಂಜೂರಾದ ಭೂಮಿಯಲ್ಲಿ ನಿಯಮ ಬಾಹಿರವಾಗಿ ಮಣ್ಣು ತೆಗೆದು ಸಾಗಾಣಿಕೆ ಮಾಡುತ್ತಿದ್ದ ಪ್ರಕರಣವೊಂದನ್ನು ಕಂದಾಯ ಇಲಾಖೆ ಪತ್ತೆಹಚ್ಚಿದ್ದು, ಸಂಬಂಧಪಟ್ಟವರಿಗೆ ಭಾರೀ ಮೊತ್ತದ ದಂಡ ವಿಧಿಸಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

​ಘಟನೆಯ ಹಿನ್ನೆಲೆ: ರಾಣೆಬೆನ್ನೂರು ತಾಲ್ಲೂಕಿನ ಬೇಲೂರು ಗ್ರಾಮದ ಸರ್ವೆ ನಂಬರ್ 32/*/5 ಕ್ಕೆ ಸಂಬಂಧಿಸಿದಂತೆ ಈ ನೋಟಿಸ್ ಜಾರಿಯಾಗಿದೆ. ಸದರಿ ಜಮೀನು ಸರ್ಕಾರದಿಂದ ಕೃಷಿ ಚಟುವಟಿಕೆಗಳಿಗಾಗಿ ಮಂಜೂರಾಗಿದ್ದು, ಅಲ್ಲಿ ಕೇವಲ ಬೆಳೆಗಳನ್ನು ಬೆಳೆಯಲು ಮಾತ್ರ ಅವಕಾಶವಿರುತ್ತದೆ. ಆದರೆ, ಈ ಜಮೀನಿನಲ್ಲಿ ಯಾವುದೇ ಪರವಾನಗಿ ಇಲ್ಲದೆ ಅನಧಿಕೃತವಾಗಿ ಮಣ್ಣನ್ನು ಅಗೆದು ಸಾಗಾಣಿಕೆ ಮಾಡಲಾಗುತ್ತಿದೆ ಎಂಬ ದೂರು ಬಂದಿತ್ತು.

ನಿಯಮ ಉಲ್ಲಂಘನೆ: ದೂರಿನ ಆಧಾರದ ಮೇರೆಗೆ ಫೆ. 23 ರಂದು ಕಂದಾಯ ಇಲಾಖೆ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಜಂಟಿ ಪರಿಶೀಲನೆ ನಡೆಸಿದಾಗ ಜಮೀನಿನಲ್ಲಿ ಅಕ್ರಮವಾಗಿ ಮಣ್ಣು ತೆಗೆದಿರುವುದರಿಂದ ದೊಡ್ಡ ಗುಂಡಿಗಳು ನಿರ್ಮಾಣವಾಗಿರುವುದು ಕಂಡುಬಂದಿದ್ದು ಇರುತ್ತದೆ. ಯಾವುದೇ ಪೂರ್ವಾನುಮತಿ ಅಥವಾ ಪರವಾನಗಿ ಪಡೆಯದೆ ಮಣ್ಣನ್ನು ಸಾಗಾಣಿಕೆ ಮಾಡಲಾಗಿದ್ದು, ಇದು ಕರ್ನಾಟಕ ಭೂಕಂದಾಯ ಅಧಿನಿಯಮ ಹಾಗೂ ಕರ್ನಾಟಕ ಉಪಖನಿಜ ರಿಯಾಯಿತಿ ನಿಯಮಾವಳಿ 1994 (ತಿದ್ದುಪಡಿ 2021) ರ ನೇರ ಉಲ್ಲಂಘನೆಯಾಗಿದೆ ಎನ್ನಲಾಗಿದೆ.

​ರೈತನಿಗೆ ದಂಡ ವಿಧಿಸಿದ ಇಲಾಖೆ: ಹಾವೇರಿ ​ಗಣಿ ಮತ್ತು ಭೂವಿಜ್ಞಾನ ಇಲಾಖೆಯ ತಾಂತ್ರಿಕ ಅಧಿಕಾರಿಗಳು ವೈಜ್ಞಾನಿಕವಾಗಿ ಅಳತೆ ಮಾಡಿದಾಗ ಸುಮಾರು 756 ಮೆಟ್ರಿಕ್ ಟನ್ ಮಣ್ಣನ್ನು ಅಕ್ರಮವಾಗಿ ತೆಗೆದಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ನಷ್ಟನ್ನು ಉಂಟು ಮಾಡಿದ ರೈತನಿಗೆ ಇಲಾಖೆಯು ಬರೋಬ್ಬರಿ 2,64,600/- (ಎರಡು ಲಕ್ಷದ ಅರವತ್ನಾಲ್ಕು ಸಾವಿರದ ಆರುನೂರು ರೂಪಾಯಿಗಳು) ದಂಡ ವಿಧಿಸಿ ಆದೇಶಿಸಿದೆ.

ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಗಳಿಗೆ ಅಥವಾ ವಾಣಿಜ್ಯ ಮಣ್ಣು ಗಣಿಗಾರಿಕೆಗೆ ಬಳಸುವ ಮುನ್ನ ಸರ್ಕಾರದ ಅನುಮತಿ ಕಡ್ಡಾಯ. ಇಲ್ಲದಿದ್ದಲ್ಲಿ ಇಂತಹ ಕಠಿಣ ಆರ್ಥಿಕ ದಂಡ ಮತ್ತು ಕಾನೂನು ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ ಎಂಬುದು ಈ ಪ್ರಕರಣದಿಂದ ಸ್ಪಷ್ಟವಾಗಿದೆ.

​ನೋಟಿಸ್ ತಲುಪಿದ 7 ದಿನಗಳ ಒಳಗಾಗಿ ಈ ದಂಡದ ಮೊತ್ತವನ್ನು ನಿಗದಿತ ಸರ್ಕಾರಿ ಲೆಕ್ಕ ಶೀರ್ಷಿಕೆಗೆ ಚಲನ್ ಮೂಲಕ ಪಾವತಿಸಿ, ಅದರ ಪ್ರತಿಯನ್ನು ಕಚೇರಿಗೆ ಸಲ್ಲಿಸಲು ಸೂಚಿಸಲಾಗಿದೆ. ಒಂದು ವೇಳೆ ದಂಡ ಪಾವತಿಸಲು ವಿಫಲರಾದಲ್ಲಿ, ಕರ್ನಾಟಕ ಭೂಕಂದಾಯ ಕಾಯ್ದೆ 1964 ರ ಕಲಂ 96(4) ರ ಅನ್ವಯ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಹಶೀಲ್ದಾರರು ಎಚ್ಚರಿಕೆ ನೀಡಿದ್ದಾರೆ.

ಹೆಚ್ಚಿನ ಸುದ್ದಿ