
ಗದಗ: “ಕಲೆ ಎಂಬುದು ಕೇವಲ ಮನರಂಜನೆಗಾಗಿ ಇರುವ ಸಾಧನವಲ್ಲ, ಅದು ನಮ್ಮ ಸಂಸ್ಕೃತಿಯ ಪ್ರತಿಬಿಂಬ. ನಮ್ಮ ಸಂಪ್ರದಾಯ, ಭಾಷೆ ಮತ್ತು ಬದುಕಿನ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಶಕ್ತಿ ಕಲೆಗಿದೆ,” ಎಂದು ಪ್ರಜಾಪತೆ ಟ್ರಸ್ಟ್ ಅಧ್ಯಕ್ಷರು ಹಾಗೂ ಭಾಜಪ ಮುಖಂಡರಾದ ಶ್ರೀಮತಿ ಪ್ರೀತಿ ಹೊನ್ನಗುಡಿ ಅವರು ಹೇಳಿದರು.
ನಗರದ ಬಿ.ಡಿ.ಓ ಆಫೀಸ್ ಎದುರಿಗಿನ ಪಂಡಿತ ಶ್ರೀ ಭೀಮಸೇನ ಜೋಶಿ ರಂಗಮಂದಿರದಲ್ಲಿ ಇತ್ತೀಚೆಗೆ ‘ನಟರಂಗ’ ಕಲ್ಚರಲ್ ಅಕಾಡೆಮಿ ಹಾಗೂ ಟ್ರಸ್ಟ್ (ರಿ)ವತಿಯಿಂದ ಆಯೋಜಿಸಲಾಗಿದ್ದ ದಶಮಾನೋತ್ಸವ ಹಾಗೂ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸನ್ಮಾನಿತರಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ಪರಂಪರೆಯ ರಕ್ಷಣೆ:
ಇಂದಿನ ವೇಗದ ಜೀವನದಲ್ಲಿ ಜನರು ತಮ್ಮ ಬೇರುಗಳನ್ನು ಮರೆಯುತ್ತಿರುವ ಪರಿಸ್ಥಿತಿ ಎದುರಾಗಿದೆ. ಅಂತಹ ಸಮಯದಲ್ಲಿ ನೃತ್ಯ, ಸಂಗೀತ, ನಾಟಕ ಮತ್ತು ಸಾಹಿತ್ಯದಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಸಮಾಜವನ್ನು ಒಗ್ಗೂಡಿಸಿ ನಮ್ಮ ಪರಂಪರೆಯನ್ನು ಉಳಿಸುವ ಮಹತ್ವದ ಕೆಲಸ ಮಾಡುತ್ತಿವೆ. ‘ನಟರಂಗ’ ಸಂಸ್ಥೆಯು ಕಳೆದ ಹತ್ತು ವರ್ಷಗಳಿಂದ ಅನೇಕ ಯುವ ಕಲಾವಿದರಿಗೆ ವೇದಿಕೆ ಕಲ್ಪಿಸಿ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಯಶಸ್ಸು ಮತ್ತು ಗೌರವ:
ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, “ಒಬ್ಬ ವ್ಯಕ್ತಿಗೆ ಸಮಾಜದಲ್ಲಿ ಸಿಗುವ ಗೌರವ ಅವನ ಪರಿಶ್ರಮಕ್ಕೆ ಸಿಕ್ಕ ಪ್ರತಿಫಲ. ಇಂದು ನನಗೆ ದೊರೆಯುತ್ತಿರುವ ಈ ಗೌರವ ನನ್ನೊಬ್ಬಳದ್ದಲ್ಲ; ನನ್ನ ಶಕ್ತಿಯಾಗಿರುವ ಕುಟುಂಬದವರು, ದಾರಿದೀಪವಾದ ಗುರುಗಳು ಮತ್ತು ಸದಾ ಬೆಂಬಲವಾಗಿ ನಿಂತಿರುವ ಅಭಿಮಾನಿಗಳದ್ದಾಗಿದೆ. ಯಶಸ್ಸು ಎಂಬುದು ಎಂದಿಗೂ ಏಕಾಂಗಿ ಸಾಧನೆಯಲ್ಲ,” ಎಂದು ಮಾರ್ಮಿಕವಾಗಿ ನುಡಿದರು.
ಯುವ ಪ್ರತಿಭೆಗಳಿಗೆ ಕಿವಿಮಾತು:
ಯುವ ಕಲಾವಿದರನ್ನು ಉದ್ದೇಶಿಸಿ ಮಾತನಾಡುತ್ತಾ, “ನಿಮ್ಮಲ್ಲಿರುವ ಪ್ರತಿಭೆಯನ್ನು ಎಂದಿಗೂ ಕಡೆಗಣಿಸಬೇಡಿ. ಪರಿಶ್ರಮಕ್ಕೆ ಪರ್ಯಾಯವೇ ಇಲ್ಲ. ಅವಕಾಶಗಳು ತಡವಾಗಿ ಬಂದರೂ ನಿರಾಶರಾಗದೆ ನಿಮ್ಮ ಕನಸುಗಳ ಮೇಲೆ ನಂಬಿಕೆ ಇಡಿ. ಒಂದು ದಿನ ನಿಮ್ಮ ಸಾಧನೆಗೆ ಸರಿಯಾದ ಗೌರವ ಖಂಡಿತ ಸಿಗುತ್ತದೆ,” ಎಂದು ಸ್ಫೂರ್ತಿ ತುಂಬಿದರು.
ಕಾರ್ಯಕ್ರಮದಲ್ಲಿ ಗಣ್ಯರ ಉಪಸ್ಥಿತಿ:
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಮ.ಘ.ಚ ಅಭಿನವ ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿದ್ದರು. ವಿಧಾನಪರಿಷತ್ ಸದಸ್ಯರಾದ ಶ್ರೀ ಎಸ್. ವಿ. ಸಂಕನೂರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಹಿರಿಯ ರಂಗಕರ್ಮಿ ಮಂಡ್ಯ ರಮೇಶ್, ಶಾಸಕರಾದ ಡಾ. ಚಂದ್ರು ಲಮಾಣಇ, ಶ್ರೀ ರಾಜು ಕುರಡಗಿ, ಶ್ರೀ ಕೃಷ್ಣಗೌಡ ಪಾಟೀಲ ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶ್ರೀ ಬಾಬಾಹುಸೇನ್ ಗುಳಗಂದಿ ಅವರಿಗೆ ‘ನಟರಂಗ ಸಾಧಕರತ್ನ ಪ್ರಶಸ್ತಿ-2026’ನೀಡಿ ಗೌರವಿಸಲಾಯಿತು. ಶಿಬಿರಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ನಾಟಕ ಪ್ರದರ್ಶನಗಳು ನೆರೆದಿದ್ದವರ ಗಮನ ಸೆಳೆದವು.
