Wednesday, March 4, 2026
HomeUncategorizedಕರ್ತವ್ಯಕ್ಕೆ ನಿರ್ಲಕ್ಷ್ಯ – ರಾಷ್ಟ್ರಧ್ವಜಕ್ಕೆ ಅಪಮಾನ ಆರೋಪ: ಪಿಡಿಓ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಧರಣಿ

ಕರ್ತವ್ಯಕ್ಕೆ ನಿರ್ಲಕ್ಷ್ಯ – ರಾಷ್ಟ್ರಧ್ವಜಕ್ಕೆ ಅಪಮಾನ ಆರೋಪ: ಪಿಡಿಓ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಧರಣಿ

ಲಿಂಗಸುಗೂರು: ಕರ್ತವ್ಯಕ್ಕೆ ನಿರ್ಲಕ್ಷ್ಯ ತೋರಿಸಿ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದಾರೆಂದು ಆರೋಪಿಸಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶೋಭಾ ರಾಣಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ಜನ ಜಾಗೃತಿ ಸಮಿತಿಯ ವತಿಯಿಂದ ಸಹಾಯಕ ಆಯುಕ್ತರ ಕಚೇರಿ ಮುಂದೆ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲಾಯಿತು.
ಧರಣಿಯಲ್ಲಿ ಪಾಲ್ಗೊಂಡ ಸಂಘಟನೆ ಸದಸ್ಯರು, ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ಪಿಡಿಓ ವಿರುದ್ಧ ‘ರಾಷ್ಟ್ರ ಗೌರವ ಸಂರಕ್ಷಣಾ ಕಾಯ್ದೆ–1971.ಸೆಕ್ಷನ್ 2 ಉಲ್ಲಂಘನೆಯಡಿ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು. ಆದರೆ ಈ ಪ್ರಕರಣದಲ್ಲಿ ಸಂಬಂಧಿಸಿದ ಅಧಿಕಾರಿಗಳು ಯಾವುದೇ ತನಿಖೆ ನಡೆಸದೆ ನಿರ್ಲಕ್ಷ್ಯ ತೋರಿದ್ದು, ಪಿಡಿಓ ಅವರಿಗೆ ಬೆಂಬಲ ನೀಡುತ್ತಿರುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ ಎಂದು ಆರೋಪಿಸಿದರು.
ಪಿಡಿಓ ಶೋಭಾ ರಾಣಿ ಅವರು ನೀಡಿದ ಉಡಾಫೆ ಉತ್ತರದ ಕುರಿತು ವಿಡಿಯೋ ಹಾಗೂ ಆಡಿಯೋ ದಾಖಲೆಗಳನ್ನು ನಾವು ಸಲ್ಲಿಸಿದ್ದೇವೆ. ಇದಾದರೂ ತನಿಖಾ ವರದಿ ಸಿದ್ಧಪಡಿಸದೆ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ ಅವರು ಪಿಡಿಓಗೆ ಪರೋಕ್ಷ ಬೆಂಬಲ ನೀಡುತ್ತಿರುವುದು ಬೇಸರಕಾರಿ ಸಂಗತಿ ಎಂದು ಧರಣಿ ನಿರತರು ಆಕ್ರೋಶ ವ್ಯಕ್ತಪಡಿಸಿದರು.
ಒಂದು ವಾರದೊಳಗೆ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ ಹಾಗೂ ಪಿಡಿಓ ಶೋಭಾ ರಾಣಿ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಅಮಾನತು ಮಾಡಬೇಕು. ಇಲ್ಲದಿದ್ದರೆ ಧರಣಿ ತೀವ್ರಗೊಳಿಸಲಾಗುವುದು ಎಂದು ಸಂಘಟನೆ ಎಚ್ಚರಿಕೆ ನೀಡಿತು.
ಈ ಸಂದರ್ಭದಲ್ಲಿ ಸಂಘದ ಸಂಸ್ಥಾಪಕರಾದ ಯೇಸಪ್ಪ, ತಾಲ್ಲೂಕು ಅಧ್ಯಕ್ಷ ಕಿರಣಕುಮಾರ, ಹುಲುಗಪ್ಪ ಸೈದಾಪುರ, ಮರೆಶ ಭಂಡಾರಿ, ಚಂದ್ರಪ್ಪ ಕವಿತಾಳ, ಸುರೇಶ್, ಚಿನ್ನಪ್ಪ, ರವಿಕುಮಾರ, ಪ್ರದೀಪ ಚಿಕೈಸರೂರ ಸೇರಿದಂತೆ ಹಲವರು ಅನಿರ್ದಿಷ್ಟಾವಧಿ ಧರಣಿಯಲ್ಲಿ ಭಾಗವಹಿಸಿದ್ದರು.

ಹೆಚ್ಚಿನ ಸುದ್ದಿ