ಸಾಂಗ್ಲಿ/ಅಥಣಿ: ತಾಲೂಕಿನ ಐಗಳಿ ಗ್ರಾಮದ ಮೈನುದ್ದೀನ್ ಡೊಂಗರಗಾಂವ್ ಅವರು ಒಣದ್ರಾಕ್ಷಿ (ಬೇದಾನಿ) ಉದ್ಯಮದ ಅಭಿವೃದ್ಧಿಗೆ ನೀಡಿರುವ ಗಣನೀಯ ಕೊಡುಗೆ ಹಾಗೂ ಕೃಷಿ ಕ್ಷೇತ್ರದಲ್ಲಿ ವಿಶಿಷ್ಟ ಸೇವೆಗಾಗಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಮಹಾರಾಷ್ಟ್ರದ ಸಾಂಗ್ಲಿಯ ಎಪಿಎಂಸಿ ಆವರಣದಲ್ಲಿ ನಡೆದ ಸಮಾರಂಭದಲ್ಲಿ, ಎಪಿಎಂಸಿ ಸಾಂಗ್ಲಿಯ ಕಾರ್ಯದರ್ಶಿ ಮಹೇಶ್ ಚವ್ಹಾಣ್ ಹಾಗೂ ಮಾರ್ಕೆಟ್ ಯಾರ್ಡ್‌ನ ಶ್ರೀಮಂತ ಬದನಿಕಾಯಿ & ಕಂಪನಿಯ ಮಾಲೀಕ ಶ್ರೀಮಂತ ಬದನಿಕಾಯಿ ಅವರು ಮೈನುದ್ದೀನ್ ಡೊಂಗರಗಾಂವ್ ಅವರಿಗೆ ಗೌರವಾರ್ಪಣೆ ಸಲ್ಲಿಸಿದರು.
ಕೃಷಿ ಉತ್ಪನ್ನಗಳ ಮಾರುಕಟ್ಟೆಯಲ್ಲಿನ ಸುಧಾರಣೆಗಳು, ಕೃಷಿಕರ ಸರ್ವತೋಮುಖ ಅಭಿವೃದ್ಧಿಗೆ ನೀಡಿದ ಬೆಂಬಲ ಹಾಗೂ ಸಮಾಜಮುಖಿ ಕಾರ್ಯಗಳಲ್ಲಿ ಮೈನುದ್ದೀನ್ ಡೊಂಗರಗಾಂವ್ ಅವರು ಸಲ್ಲಿಸುತ್ತಿರುವ ಸೇವೆಗಳನ್ನು ಈ ಸಂದರ್ಭದಲ್ಲಿ ಗಣ್ಯರು ಮುಕ್ತಕಂಠದಿಂದ ಶ್ಲಾಘಿಸಿದರು.
ಕೃಷಿ ರಂಗದಲ್ಲಿ ಅವರು ತೋರುತ್ತಿರುವ ಬದ್ಧತೆ ಮತ್ತು ನಿರಂತರ ಶ್ರಮ ಇಂದಿನ ಯುವ ಕೃಷಿಕರಿಗೆ ಮಾದರಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಮೈನುದ್ದೀನ್ ಡೊಂಗರಗಾಂವ್ ಅವರು, ಕೃಷಿಕರ ಹಿತಕ್ಕಾಗಿ ಶ್ರಮಿಸುತ್ತಿರುವುದು ಸಂತೋಷ ತಂದಿದೆ. ಈ ಸನ್ಮಾನವು ಮುಂದಿನ ದಿನಗಳಲ್ಲಿ ಇನ್ನಷ್ಟು ಕ್ರಿಯಾಶೀಲವಾಗಿ ಕೆಲಸ ಮಾಡಲು ನನಗೆ ಉತ್ತೇಜನ ನೀಡಿದೆ ಎಂದು ಕೃತಜ್ಞತೆ ಸಲ್ಲಿಸಿದರು.
