ಬಳ್ಳಾರಿ : ದೇಶದ ಅತೀ ದೊಡ್ಡ ವಿದ್ಯಾರ್ಥಿ ಸಂಘಟನೆಯಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ (ಎಬಿವಿಪಿ) 78ನೇ ಸಂಸ್ಥಾಪನಾ ದಿನವನ್ನು ಬಳ್ಳಾರಿ ಜಿಲ್ಲಾ ಕಾರ್ಯಾಲಯದಲ್ಲಿ ಅತ್ಯಂತ ಸಡಗರ ಮತ್ತು ಗೌರವಪೂರ್ವಕವಾಗಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಎನ ರವಿಕುಮಾರ ಅವರು, “ಜ್ಞಾನ, ಶೀಲ ಮತ್ತು ಏಕತೆಯ ಮಂತ್ರದೊಂದಿಗೆ ಸಾವಿರಾರು ಯುವಕರನ್ನು ‘ದೇಶ ಮೊದಲು’ ಎಂಬ ಸಿದ್ಧಾಂತಕ್ಕೆ ರೂಪಿಸಿದ ಕೀರ್ತಿ ಎಬಿವಿಪಿಗೆ ಸಲ್ಲುತ್ತದೆ. ತಾಯಿ ಭಾರತಿಯ ಚರಣಕ್ಕೆ ಯುವಶಕ್ತಿಯನ್ನು ಸಮರ್ಪಿಸುವ ನಿಟ್ಟಿನಲ್ಲಿ ಎಬಿವಿಪಿ ಸದಾ ಮುಂಚೂಣಿಯಲ್ಲಿದೆ” ಎಂದು ಬಣ್ಣಿಸಿದರು.
ಮುಂದುವರೆದು ಮಾತನಾಡಿದ ಅವರು, “ಕೇವಲ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಯಷ್ಟೇ ಅಲ್ಲದೆ, ಜ್ಞಾನದ ಜೊತೆಗೆ ಉತ್ತಮ ಚಾರಿತ್ರ್ಯ ನಿರ್ಮಾಣ ಮಾಡುವಲ್ಲಿಯೂ ಈ ಸಂಘಟನೆ ಮಹತ್ತರ ಪಾತ್ರ ವಹಿಸುತ್ತಿದೆ. ರಾಷ್ಟ್ರೀಯ ಚಿಂತನೆಗಳನ್ನು ವಿದ್ಯಾರ್ಥಿಗಳಲ್ಲಿ ಬಿತ್ತುವ ಮೂಲಕ ದೇಶದ ಬಗೆಗಿನ ಗೌರವ ಮತ್ತು ಬದ್ಧತೆಯನ್ನು ಎಬಿವಿಪಿ ನಿರಂತರವಾಗಿ ಜಾಗೃತಗೊಳಿಸುತ್ತಿದೆ. ಇಂತಹ ಸಂಘಟನೆಯ ಭಾಗವಾಗಿರುವುದು ಪ್ರತಿಯೊಬ್ಬ ವಿದ್ಯಾರ್ಥಿಗೂ ಹೆಮ್ಮೆಯ ವಿಷಯ” ಎಂದು ತಿಳಿಸಿದರು.
ಈ ವಿಶೇಷ ದಿನದ ಅಂಗವಾಗಿ ಸಮಸ್ತ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ವಿದ್ಯಾರ್ಥಿ ದಿನದ ಹಾರ್ದಿಕ ಶುಭಾಶಯಗಳನ್ನು ಕೋರಲಾಯಿತು. ಕಾರ್ಯಕ್ರಮದಲ್ಲಿ ಎಬಿವಿಪಿಯ ಪದಾಧಿಕಾರಿಗಳು, ಕಾರ್ಯಕರ್ತರು ಮತ್ತು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
