ಬೆಂಗಳೂರು; ಪರಿಶಿಷ್ಟ ಜಾತಿಯ 101 ಸಮುದಾಯಗಳ ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯ ಪ್ರಾತಿನಿಧ್ಯ ಕುರಿತಾದ ಸಮಗ್ರ, ವಸ್ತುನಿಷ್ಟ ಅಂಕಿ-ಅಂಶಗಳ ಕೊರತೆ ಇರುವ, ಅಮಸಮರ್ಥನೀಯ ಹಾಗೂ ಅತಾರ್ಕಿಕ ದತ್ತಾಂಶಗಳನ್ನು ಆಧರಿಸಿದ ಪರಿಶಿಷ್ಟ ಜಾತಿಯ ಒಳಮೀಸಲಾತಿ ವರ್ಗೀಕರಣವನ್ನು ತಿರಸ್ಕರಿಸಬೇಕು. ಕಾಂತರಾಜು ಆಯೋಗದ ವರದಿಯನ್ನು ಬಹಿರಂಗ ಪಡಿಸಬೇಕು ಅಖಿಲ ಕರ್ನಾಟಕ ಕುಳುವ ಮಹಾಸಂಘ ಆಗ್ರಹಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎ. ಕೆ. ಎಂ. ಎಸ್ ರಾಜ್ಯಾಧ್ಯಕ್ಷ ಶಿವಾನಂದ ಭಜಂತ್ರಿ, ದಮನಿತ ಹಾಗೂ ಅವಕಾಶ ವಂಚಿತ ಅಲೆಮಾರಿ, ಕೊರಮ-ಕೊರಚ-ಕೊರವ ಸಮುದಾಯಗಳಿಗೆ ಇದರಿಂದ ಭಾರೀ ಪ್ರಮಾಣದಲ್ಲಿ ಅನ್ಯಾಯವಾಗಲಿದೆ. ಪರಿಶಿಷ್ಟ ಜಾತಿಯ ಒಳಮೀಸಲಾತಿಯ ವರ್ಗೀಕರಣಕ್ಕೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯದ ಸಂವಿಧಾನಪೀಠ ತೀರ್ಪು ನೀಡಿದ್ದು, ಇದನ್ನು ಜಾರಿಗೊಳಿಸಲು ಸೂಕ್ತ ಮಾಹಿತಿ ಕೊರತೆ ಇದೆ. ಆದರೂ ಒಳಮೀಸಲಾತಿ ವರ್ಗೀಕರಣಕ್ಕೆ ಸರ್ಕಾರ ಮುಂದಾಗಿರುವುದು ಸಾಮಾಜಿಕ ನ್ಯಾಯದ ಕಗ್ಗೊಲೆಯಾಗಿದೆ. ಕೆಲವು ಪಟ್ಟಭದ್ರರ ಒತ್ತಡಕ್ಕೆ ಮಣಿದು ಏಕಾಏಕಿ ಒಳಮೀಸಲಾತಿ ವರ್ಗೀಕರಣ ಕುರಿತಾಗಿ ಏಕಪಕ್ಷೀಯ ನಿರ್ಧಾರಗಳನ್ನು ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲು ಮುಂದಾಗಿವುದು ಸರಿಯಲ್ಲ ಎಂದರು.
ರಾಜ್ಯದಲ್ಲಿರುವ 101 ಪರಿಶಿಷ್ಟ ಜಾತಿಗಳ ಮೀಸಲಾತಿ ಹಂಚಿಕೆ ಕುರಿತಾದ ಸಮಗ್ರ ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕ ಹಾಗೂ ರಾಜಕೀಯ ಕ್ಷೇತ್ರಗಳ ಪ್ರಾತಿನಿಧ್ಯವನ್ನು ಖಾತ್ರಿಪಡಿಸಲು ಸಮರ್ಥನೀಯ ಹಾಗೂ ವೈಜ್ಞಾನಿಕ ದತ್ತಾಂಶಗಳನ್ನು ಕ್ರೋಢಿಕರಿಸಿ, ವಿಶ್ಲೇಷಿಸಿ ತಜ್ಞರ ವರದಿಯನ್ನು ಪಡೆದುಕೊಂಡೇ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ಮಾಡಿರುವ ಕಾಂತರಾಜು ಆಯೋಗದ ವರದಿಯನ್ನು ಕೂಡಲೇ ಬಹಿರಂಗಗೊಳಿಸಿ ಸದರಿ ವರದಿಯಲ್ಲಿರುವ ದತ್ತಾಂಶಗಳನ್ನು ಪರಿಣಿಸಬೇಕು ಎಂದರು.
ಪರಿಶಿಷ್ಟ ಜಾತಿಯ 101 ಸಮುದಾಯಗಳ ಪೈಕಿ 51 ಜಾತಿಗಳು ಗುರುತಿಸಲ್ಪಟ್ಟ ಅಲೆಮಾರಿ ಮತ್ತು ವಿಮುಕ್ತ ಸಮುದಾಯಗಳಾಗಿವೆ. ಇವುಗಳ ಸಾಮಾಜಿಕ ಹಿಂದುಳಿದಿರುವಿಕೆ, ಶೈಕ್ಷಣಿಕ, ಔದ್ಯೋಗಿಕ ಹಾಗೂ ರಾಜಕೀಯ ಮೀಸಲಾತಿ ಪ್ರಾತಿನಿಧ್ಯ ಕುರಿತಾದ ಸಮರ್ಥನೀಯ ದತ್ತಾಂಶಗಳನ್ನು (ಎಂಪೆರಿಕಲ್ ಡೇಟಾ) ಕ್ರೋಡಿಕರಿಸಿ, ವೈಜ್ಞಾನಿಕವಾಗಿ ವಿಶ್ಲೇಷಿಸಲು ಸಾಮಾಜಿಕ, ಶೈಕ್ಷಣಿಕ ಮತ್ತು ಕಾನೂನು ಪರಿಣಿತಿಯುಳ್ಳ ತಜ್ಞರ ಸಮಿತಿಯನ್ನು ಕೂಡಲೇ ರಚಿಸಬೇಕು. ಸಮುದಾಯಗಳ ಸಂಘ ಸಂಸ್ಥೆಗಳ ಮುಖಂಡರು ಹಾಗೂ ಚಿಂತಕರೊಂದಿಗೆ ಸಮಾಲೋಚಿಸಿ ನಂತರ ಪರಿಶಿಷ್ಟ ಜಾತಿ ಒಳಮೀಸಲಾತಿಯ (ವರ್ಗೀಕರಣ) ತೀರ್ಮಾನ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಗೌರವಾಧ್ಯಕ್ಷರು ಮತ್ತು ಮಾಜಿ ಶಾಸಕ ಜಿ. ಚಂದ್ರಣ್ಣ, ಏಕಲವ್ಯ ರಾಜ್ಯ ಪ್ರದಾನ ಕಾರ್ಯದರ್ಶಿ ಆನಂದ್ ಕುಮಾರ್, ಜಂಟಿ ಕಾರ್ಯದರ್ಶಿ ಕಿರಣ್ ಕುಮಾರ್, ಮಹಿಳಾ ಅಧ್ಯಕ್ಷರಾದ ಸುಗುಣ ಅಶ್ವತ್ಥ್, ಜಿಲ್ಲಾಧ್ಯಕ್ಷ ವಿಜಯ್ ರಂಗಪ್ಪ ಮತ್ತಿತರರು ಉಪಸ್ಥಿತರಿದ್ದರು.