Saturday, June 13, 2026
Homeಜಿಲ್ಲಾ ಸುದ್ದಿಗಳುಅಥಣಿ ಜೋಡು ಕೆರೆ ಅಭಿವೃದ್ಧಿ ಕಾಮಗಾರಿ ವೀಕ್ಷಿಸಿದ ಶಾಸಕ ಲಕ್ಷ್ಮಣ ಸವದಿ, ಕಾಮಗಾರಿ ಚುರುಕುಗೊಳಿಸಲು ಸೂಚನೆ

ಅಥಣಿ ಜೋಡು ಕೆರೆ ಅಭಿವೃದ್ಧಿ ಕಾಮಗಾರಿ ವೀಕ್ಷಿಸಿದ ಶಾಸಕ ಲಕ್ಷ್ಮಣ ಸವದಿ, ಕಾಮಗಾರಿ ಚುರುಕುಗೊಳಿಸಲು ಸೂಚನೆ

ಅಥಣಿ: ಪಟ್ಟಣದ ಐತಿಹಾಸಿಕ ಜೋಡು ಕೆರೆಯ ಅಭಿವೃದ್ಧಿ ಕಾಮಗಾರಿಗಳನ್ನು ಗುಣಮಟ್ಟದಿಂದ ಮತ್ತು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ಶಾಸಕ ಲಕ್ಷ್ಮಣ ಸವದಿ ಅವರು ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜೋಡು ಕೆರೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಶಾಸಕರು ನೇರವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಅಥಣಿ ಪ್ರವಾಸಿ ಮಂದಿರದ ಸಭಾ ಭವನದಲ್ಲಿ ಪುರಸಭೆ ಸದಸ್ಯರು, ಮುಖ್ಯಾಧಿಕಾರಿಗಳು ಮತ್ತು ಗುತ್ತಿಗೆದಾರರೊಂದಿಗೆ ವಿಶೇಷ ಸಭೆಯನ್ನು ನಡೆಸಿದರು.

ಸಭೆಯಲ್ಲಿ ಕಾಮಗಾರಿಯ ಪ್ರಗತಿಯ ಬಗ್ಗೆ ಕೂಲಂಕಷವಾಗಿ ಮಾಹಿತಿ ಪಡೆದ ಶಾಸಕ ಲಕ್ಷ್ಮಣ ಸವದಿ ಅವರು ಮಾತನಾಡುತ್ತಾ, “ಜೋಡು ಕೆರೆಯು ಅಥಣಿಯ ಪ್ರಮುಖ ಆಕರ್ಷಣೆಯಾಗಿದೆ. ಈ ಕಾಮಗಾರಿಯಲ್ಲಿ ಯಾವುದೇ ಕಾರಣಕ್ಕೂ ವಿಳಂಬ ಅಥವಾ ಕಳಪೆ ಗುಣಮಟ್ಟವನ್ನು ಸಹಿಸುವುದಿಲ್ಲ. ಸಾರ್ವಜನಿಕರ ದೀರ್ಘಕಾಲದ ಬೇಡಿಕೆಯಾಗಿರುವ ಈ ಯೋಜನೆಯನ್ನು ಅಚ್ಚುಕಟ್ಟಾಗಿ ಪೂರ್ಣಗೊಳಿಸಿ, ಪಟ್ಟಣದ ಜನತೆಗೆ ಸುಂದರ ಪರಿಸರವನ್ನು ಕಲ್ಪಿಸಿಕೊಡುವುದು ನಮ್ಮ ಆದ್ಯತೆಯಾಗಿದೆ” ಎಂದು ತಿಳಿಸಿದರು.
ಅಲ್ಲದೆ, ಕಾಮಗಾರಿ ಸ್ಥಳದಲ್ಲಿ ಎದುರಾಗುವ ತಾಂತ್ರಿಕ ಅಡಚಣೆಗಳನ್ನು ತಕ್ಷಣವೇ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಅವರು, ಕೆಲಸದ ಗುಣಮಟ್ಟದ ಮೇಲೆ ನಿರಂತರ ನಿಗಾ ವಹಿಸುವಂತೆ ಪುರಸಭೆ ಸದಸ್ಯರಿಗೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಪುರಸಭೆ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಉಪಸ್ಥಿತರಿದ್ದು.

ಹೆಚ್ಚಿನ ಸುದ್ದಿ