ಚನ್ನಮ್ಮನ ಕಿತ್ತೂರು, ಜೂ. 29: ಅಂಗೈಕ್ಯ ಪೂಜ್ಯ ಮ.ನಿ. ಮಹಾ ಜಗದ್ಗುರು ಅಂಗಾನಂದ ಮಹಾಸ್ವಾಮಿಗಳವರ ಅಂಗೈಕ್ಯ ಸಂಸ್ಕರಣೆ ಹಾಗೂ ಧರ್ಮ ಚಿಂತನಗೋಷ್ಠಿ ಕಾರ್ಯಕ್ರಮವು ಜೂನ್ 30ರಂದು (ಮಂಗಳವಾರ) ಸಂಜೆ 7 ಗಂಟೆಗೆ ಬಸವನಗರದ ಬೀಡಿ ರಸ್ತೆಯಲ್ಲಿರುವ ಶ್ರೀ ಗುರು ಬಸವ ಮಂಟಪದಲ್ಲಿ ನಡೆಯಲಿದೆ.
ಕಾರ್ಯಕ್ರಮವು ಮ.ನಿ.ಪ್ರ.ಸ್ವ. ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ನಡೆಯಲಿದ್ದು, ದೇಗುಲಹಳ್ಳಿ-ಅಂಬಡಗಟ್ಟಿಯ ಶ್ರೀ ಗುರು ಮಡಿವಾಳೇಶ್ವರ ಮಠದ ಮಹಾತಪಸಿ ವಿರೇಶ್ವರ ಮಹಾಸ್ವಾಮಿಗಳು ಧ್ವಜಾರೋಹಣ ನೆರವೇರಿಸಲಿದ್ದಾರೆ.
ಪಟ್ಟಣ ಪಂಚಾಯಿತಿ ಅಧ್ಯಕ್ಷ ಜೈಸಿದ್ಧರಾಮ ಮಾರಿಹಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಧಾರವಾಡದ ಹೈಕೋರ್ಟ್ ನ್ಯಾಯವಾದಿ ಕೆ.ಎಸ್. ಕೋರಿಶೆಟ್ಟರ ಅವರು ನುಡಿನಮನ ಸಲ್ಲಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಶಾಸಕ ಬಾಬಾಸಾಹೇಬ ದೇ. ಪಾಟೀಲ, ಮಾಜಿ ಶಾಸಕ ಮಹಾಂತೇಶ ಬ. ದೊಡಗೌಡರ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು, ಸಮಾಜದ ಮುಖಂಡರು, ವೈದ್ಯರು, ಜನಪ್ರತಿನಿಧಿಗಳು ಹಾಗೂ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮವನ್ನು ಶ್ರೀ ಗುರು ಬಸವೇಶ್ವರ ಅಭಿವೃದ್ಧಿ ಸೇವಾ ಸಂಘ, ರಾಷ್ಟ್ರೀಯ ಬಸವ ದಳ ತಾಲೂಕು ಘಟಕ, ಅಂಗಾಯತ ಧರ್ಮ ಮಹಾಸಭೆ, ಜಾಗತಿಕ ಲಿಂಗಾಯತ ಮಹಾಸಭೆ ಹಾಗೂ ಇತರ ಬಸವಪರ ಸಂಘಟನೆಗಳು ಸಂಯುಕ್ತವಾಗಿ ಆಯೋಜಿಸಿವೆ.
ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶರಣರು, ಭಕ್ತರು ಹಾಗೂ ಸಾರ್ವಜನಿಕರು ಭಾಗವಹಿಸಿ ಧರ್ಮ ಚಿಂತನಗೋಷ್ಠಿಯನ್ನು ಯಶಸ್ವಿಗೊಳಿಸುವಂತೆ ಸಂಘಟಕರು ಮನವಿ ಮಾಡಿದ್ದಾರೆ.
