Wednesday, October 7, 2026
Homeರಾಜ್ಯಸೈನಿಕರ ತ್ಯಾಗಕ್ಕೆ ಸಮಾಜದ ಗೌರವ ಅಗತ್ಯಗಡಿಯಲ್ಲಿ ಜೀವ ಪಣಕ್ಕಿಟ್ಟು ಹೋರಾಡುವ ಯೋಧರಿಗೆ ಸಿಗಬೇಕಾದ ಮಾನ್ಯತೆ, ಸೌಲಭ್ಯ...

ಸೈನಿಕರ ತ್ಯಾಗಕ್ಕೆ ಸಮಾಜದ ಗೌರವ ಅಗತ್ಯಗಡಿಯಲ್ಲಿ ಜೀವ ಪಣಕ್ಕಿಟ್ಟು ಹೋರಾಡುವ ಯೋಧರಿಗೆ ಸಿಗಬೇಕಾದ ಮಾನ್ಯತೆ, ಸೌಲಭ್ಯ ಕಲ್ಪಿಸಿ: ಆರ್.ಐ. ಹಿರೇಮಠ

ಮುದ್ದೇಬಿಹಾಳ: ದೇಶದ ಗಡಿಯನ್ನು ಕಾಯುವ ಸೈನಿಕರ ನಿಸ್ವಾರ್ಥ ಸೇವೆ, ತ್ಯಾಗ ಹಾಗೂ ಅವರು ಎದುರಿಸುವ ಸಂಕಷ್ಟಗಳಿಗೆ ಸಮಾಜ ಮತ್ತು ವ್ಯವಸ್ಥೆಯಿಂದ ಇನ್ನಷ್ಟು ಗೌರವ ಹಾಗೂ ಮಾನ್ಯತೆ ದೊರೆಯಬೇಕಿದೆ ಎಂದು ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಆರ್.ಐ. ಹಿರೇಮಠ ಹೇಳಿದರು.
ಪಟ್ಟಣದ ಹುಡ್ಕೊ ಕಾಲೋನಿಯ ಪಂಜುರ್ಲಿ ಹಾಲ್‌ನಲ್ಲಿ ವೀರಯೋಧ ಬಸವರಾಜ ಮಾಗುಂಡಪ್ಪ ಕುಂಬಾರ ಅವರ 24 ವರ್ಷಗಳ ಸೇನಾ ಸೇವಾ ನಿವೃತ್ತಿ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಚಿತ್ರನಟರು ಬಂದಾಗ ಸಾವಿರಾರು ಜನರು ಅವರನ್ನು ನೋಡಲು ಮುಗಿಬೀಳುತ್ತಾರೆ. ಆದರೆ ದೇಶದ ಗಡಿಯಲ್ಲಿ ಜೀವವನ್ನೇ ಪಣಕ್ಕಿಟ್ಟು ಸೇವೆ ಸಲ್ಲಿಸಿ ಹಿಂದಿರುಗುವ ಸೈನಿಕರನ್ನು ಸ್ವಾಗತಿಸುವ ಸಂದರ್ಭದಲ್ಲಿ ಅಷ್ಟೇ ಉತ್ಸಾಹ ಕಾಣಿಸುವುದಿಲ್ಲ. ಸಮಾಜದ ಈ ಮನೋಭಾವ ಬದಲಾಗಬೇಕು ಎಂದು ಹೇಳಿದರು.
18ನೇ ವಯಸ್ಸಿನಲ್ಲೇ ಸೇನೆ ಸೇರುವ ಯುವಕರು ನಿವೃತ್ತಿಯ ನಂತರ ಸೀಮಿತ ಪಿಂಚಣಿ ಹಾಗೂ ಆದಾಯದಲ್ಲಿ ಮಕ್ಕಳ ಶಿಕ್ಷಣ ಮತ್ತು ಕುಟುಂಬದ ಜವಾಬ್ದಾರಿಗಳನ್ನು ನಿರ್ವಹಿಸಲು ಸಂಕಷ್ಟ ಎದುರಿಸುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಾಜಿ ಸೈನಿಕರಿಗೆ ನೀಡಬೇಕಾದ ಮೀಸಲಾತಿ, ಸೌಲಭ್ಯ ಹಾಗೂ ಇತರ ಹಕ್ಕುಗಳನ್ನು ಸಮರ್ಪಕವಾಗಿ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ದೇಶಕ್ಕಾಗಿ ಸೇವೆ ಸಲ್ಲಿಸಿದ ಸೈನಿಕರು ನಿವೃತ್ತಿಯ ನಂತರವೂ ವಿವಿಧ ಪ್ರಮಾಣಪತ್ರ ಹಾಗೂ ಕ್ಲಿಯರೆನ್ಸ್‌ಗಳಿಗಾಗಿ ಕಚೇರಿಗಳಿಗೆ ಅಲೆಯಬೇಕಾದ ಪರಿಸ್ಥಿತಿ ಇದೆ. ಇದನ್ನು ಸರಿಪಡಿಸುವ ಅಗತ್ಯವಿದೆ ಎಂದು ಹಿರೇಮಠ ಹೇಳಿದರು.
ಕಾರ್ಗಿಲ್ ಯುದ್ಧದ ಬಳಿಕ ಅಟಲ್ ಬಿಹಾರಿ ವಾಜಪೇಯಿ ಅವರ ಆಡಳಿತಾವಧಿಯಲ್ಲಿ ಹುತಾತ್ಮ ಸೈನಿಕರ ಪಾರ್ಥಿವ ಶರೀರಗಳನ್ನು ಗೌರವಪೂರ್ವಕವಾಗಿ ಅವರ ಸ್ವಗ್ರಾಮಗಳಿಗೆ ತಲುಪಿಸುವ ವ್ಯವಸ್ಥೆ ಜಾರಿಗೆ ಬಂದಿದ್ದನ್ನು ಅವರು ಸ್ಮರಿಸಿದರು.
ವೀರಯೋಧ ಬಸವರಾಜ ಕುಂಬಾರ ಅವರ ಧರ್ಮಪತ್ನಿ ಬಸಮ್ಮ ಮಾತನಾಡಿ, ಸೈನಿಕರು ಸೇವಾ ಅವಧಿಯಲ್ಲಿ ಎದುರಿಸುವ ಸಂಕಷ್ಟಗಳನ್ನು ಕುಟುಂಬದವರೊಂದಿಗೆ ಹಂಚಿಕೊಳ್ಳುವುದಿಲ್ಲ. ನಾನು ಇಲ್ಲಿ ಚೆನ್ನಾಗಿಯೇ ಇದ್ದೇನೆ ಎಂದು ಮಾತ್ರ ಹೇಳುತ್ತಾರೆ. ಯುದ್ಧದ ಸುದ್ದಿಗಳನ್ನು ಮಾಧ್ಯಮಗಳಲ್ಲಿ ನೋಡಿದಾಗ ಮಕ್ಕಳು ತಂದೆಯ ಬಗ್ಗೆ ಕೇಳುವ ಪ್ರಶ್ನೆಗಳಿಗೆ ಉತ್ತರಿಸುವುದು ಕಷ್ಟವಾಗುತ್ತಿತ್ತು. ಸೈನಿಕನಿಗೆ ನಿವೃತ್ತಿಯೇ ಒಂದು ರೀತಿಯಲ್ಲಿ ಮರುಜನ್ಮ ಎಂಬುದು ಈಗ ಅರಿವಾಗಿದೆ ಎಂದು ತಮ್ಮ ಅನುಭವ ಹಂಚಿಕೊಂಡರು.
ಮಾಜಿ ಸೈನಿಕ ಸಂಘದ ಅಧ್ಯಕ್ಷ ನಾನಪ್ಪ ನಾಯಕ, ರಾಚಯ್ಯ ಕಂಚಿನಮಠ ಮಾತನಾಡಿದರು.
ಈ ಸಂದರ್ಭದಲ್ಲಿ ಮಾಜಿ ಸೈನಿಕರಾದ ಸಿ.ಐ. ಬಿದರಕುಂದಿ, ಎಂ.ಬಿ. ವಟಾರ, ಬಸವರಾಜ ಬಡಿಗೇರ, ಹಣಮಂತ ಪೂಜಾರಿ, ವಿಶ್ವನಾಥ ಮಾನೆ, ಎಸ್.ಜೆ. ಕುರಿ, ಬಸವರಾಜ ಬಿರಾದಾರ ಸೇರಿದಂತೆ ಹಲವು ಮಾಜಿ ಸೈನಿಕರು ಉಪಸ್ಥಿತರಿದ್ದರು.

ಹೆಚ್ಚಿನ ಸುದ್ದಿ