ಅಥಣಿ: ಶಾಸಕ ಲಕ್ಷ್ಮಣ ಸವದಿ ಅವರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಮಾತಂಗಿ ಸಮಾಜದ ವತಿಯಿಂದ ಸ್ಥಳೀಯ ಮಾತಂಗಿ ದೇವಸ್ಥಾನ ಹಾಗೂ ದುರ್ಗಾದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಯಿತು.
ಪೂಜಾ ಕಾರ್ಯಕ್ರಮದಲ್ಲಿ ಯುವ ನಾಯಕ ಚಿದಾನಂದ ಸವದಿ ಭಾಗವಹಿಸಿ ದೇವಿಯ ಆಶೀರ್ವಾದ ಪಡೆದರು. ಇದೇ ಸಂದರ್ಭದಲ್ಲಿ ಮಾತಂಗಿ ಸಮಾಜದ ಮಹಿಳೆಯರಿಗೆ ಸೀರೆಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ನ್ಯಾಯವಾದಿ ಪ್ರಮೋದ ಹಿರೇಮನಿ, ಉತ್ತರ ಕರ್ನಾಟಕದ ಪ್ರಭಾವಿ ಹಾಗೂ ಮುತ್ಸದ್ದಿ ನಾಯಕರಾದ ಶಾಸಕ ಲಕ್ಷ್ಮಣ ಸವದಿ ಅವರು 2023ರ ವಿಧಾನಸಭಾ ಚುನಾವಣೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ನಿಷ್ಠೆಯಿಂದ ಶ್ರಮಿಸಿದ್ದಾರೆ. ಅವರು ಪ್ರಚಾರಕ್ಕೆ ಹೋದ ಎಲ್ಲೆಡೆ ಅಭ್ಯರ್ಥಿಗಳ ಗೆಲುವಿಗೆ ಪ್ರಮುಖ ಕಾರಣಕರ್ತರಾಗಿದ್ದಾರೆ ಎಂದು ಹೇಳಿದರು.
ಒಂದು ಕಾಲದಲ್ಲಿ ಮೂಲ ಸೌಕರ್ಯಗಳಿಂದ ವಂಚಿತವಾಗಿದ್ದ ಅಥಣಿ ಕ್ಷೇತ್ರವನ್ನು ರಸ್ತೆ, ನೀರಾವರಿ ಯೋಜನೆಗಳು ಹಾಗೂ ವಿವಿಧ ಸರ್ಕಾರಿ ಕಚೇರಿಗಳನ್ನು ತರಿಸುವ ಮೂಲಕ ಅಭಿವೃದ್ಧಿಯತ್ತ ಕೊಂಡೊಯ್ದ ಕೀರ್ತಿ ಶಾಸಕ ಲಕ್ಷ್ಮಣ ಸವದಿ ಅವರಿಗೆ ಸಲ್ಲುತ್ತದೆ. ಇಂದು ಅಥಣಿ ತಾಲೂಕು ಬೆಳಗಾವಿ ಜಿಲ್ಲೆಯ ಪ್ರಮುಖ ಪ್ರದೇಶಗಳೊಂದಿಗೆ ಪೈಪೋಟಿ ನಡೆಸುವ ಮಟ್ಟಕ್ಕೆ ಬೆಳೆದಿದೆ ಎಂದು ಅವರು ತಿಳಿಸಿದರು.
ಜಿಲ್ಲೆಯ ರಾಜಕೀಯ ಪರಿಸ್ಥಿತಿಯ ಕುರಿತು ಮಾತನಾಡಿದ ಅವರು, ಕೆಲವು ರಾಜಕಾರಣಿಗಳು ಸೀಮಿತ ಸಮುದಾಯ ಹಾಗೂ ಕೆಲವೇ ಕ್ಷೇತ್ರಗಳ ಅಭಿವೃದ್ಧಿಗೆ ಒತ್ತು ನೀಡುತ್ತಿದ್ದಾರೆ. ಬರಿ ಟೀಕೆ ಟಿಪ್ಪಣಿ ಗಳನ್ನು ಮಾಡುತ್ತ ಕಾಲ ಹರಣ ಮಾಡುತ್ತಿದ್ದಾರೆ ಆದರೆ ಶಾಸಕ ಲಕ್ಷ್ಮಣ ಸವದಿ ಅವರು ಯಾವುದಕ್ಕೂ ಕಿವಿಗೊಡದೆ ಎಲ್ಲ ಸಮುದಾಯಗಳನ್ನು ಒಗ್ಗೂಡಿಸಿಕೊಂಡು, ಎಲ್ಲರ ಹಿತಾಸಕ್ತಿಯನ್ನು ಕಾಪಾಡುತ್ತಾ ಅಭಿವೃದ್ಧಿಯ ಪಥದಲ್ಲಿ ಸಾಗಿಸುವ ಸಮರ್ಥ ನಾಯಕರು ಎಂದು ಬಣ್ಣಿಸಿದರು.
ರಾಜ್ಯದ ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ಸಚಿವ ಸಂಪುಟದಲ್ಲಿ ಶಾಸಕ ಲಕ್ಷ್ಮಣ ಸವದಿ ಅವರಿಗೆ ಸಚಿವ ಸ್ಥಾನ ನೀಡಿದರೆ, ರಾಜ್ಯಾದ್ಯಂತ ಹಾಗೂ ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಪಕ್ಷ ಸಂಘಟನೆಗೆ ಮತ್ತಷ್ಟು ಬಲ ದೊರೆಯಲಿದೆ. ಜೊತೆಗೆ ಪಕ್ಷದ ಬೆಳವಣಿಗೆ ಹಾಗೂ ಸಂಘಟನೆಯ ದೃಷ್ಟಿಯಿಂದಲೂ ಇದು ಮಹತ್ವದ ನಿರ್ಧಾರವಾಗಲಿದೆ ಹೀಗಾಗಿ ಡಿಕೆ ಶಿವಕುಮಾರ್ ಅವರು ತಮ್ಮ ಸಚಿವ ಸಂಪುಟದಲ್ಲಿ ಶಾಸಕ ಲಕ್ಷ್ಮಣ ಸವದಿ ಅವರನ್ನು ಸಚಿವ ಸ್ಥಾನ ನೀಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ರಾಮನ ಗೌಡ ಪಾಟಿಲ, ಮಂಜು ಹೋಳಿಕಟ್ಟಿ, ಆದರ್ಶ್ ಗಸ್ತಿ, ಪ್ರಕಾಶ ಹೆಗ್ಗಣ್ಣವರ, ಶಂಕರ ಮುರುಗುಂಡಿ, ಕರಣ ಹಿರೇಮನಿ,ಮಹೇಂದ್ರ್ ರಾಜಂಗಳೆ,ಮಹಾದೇವಿ ಹೋಳಿಕಟ್ಟಿ, ಕಮಲಾ ಹಿರೇಮನಿ, ಮಾತಂಗಿ ಸಮಾಜದ ಮುಖಂಡರು, ಮಹಿಳೆಯರು ಹಾಗೂ ಹಲವಾರು ಗಣ್ಯರು ಉಪಸ್ಥಿತರಿದ್ದರು.
ವರದಿ: ಯಾಸಿನ್ ಝಾರೆ
ಅಥಣಿ
