ಲಿಂಗಸೂಗೂರು: ಪಟ್ಟಣದ 18ನೇ ವಾರ್ಡ್‌ನ ವಿವಿಧ ರಸ್ತೆ ಅಭಿವೃದ್ಧಿಗಾಗಿ ₹2 ಕೋಟಿ ವೆಚ್ಚದ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು. ಕೆಕೆಆರ್‌ಡಿಬಿ (KKRDB) ಅನುದಾನದ ಯೋಜನೆಯಡಿ ಕೈಗೊಳ್ಳಲಾಗುತ್ತಿರುವ ಈ ಕಾಮಗಾರಿಗೆ ಲಿಂಗಸೂಗೂರು ಕ್ಷೇತ್ರದ ಶಾಸಕರಾದ ಮಾನಪ್ಪ ಡಿ ವಜ್ಜಲ್ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಪಟ್ಟಣದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು. ರಸ್ತೆ ಕಾಮಗಾರಿಗಳು ಗುಣಮಟ್ಟದೊಂದಿಗೆ ಮತ್ತು ಟೆಂಡರ್ ನಿಯಮಾವಳಿಗಳ ಪ್ರಕಾರ ನಡೆಯಬೇಕು ಎಂದು ಗುತ್ತಿಗೆದಾರರಿಗೆ ಸೂಚನೆ ನೀಡಿದರು. ಜೊತೆಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕಾಮಗಾರಿಯನ್ನು ಶೀಘ್ರವಾಗಿ ಪ್ರಾರಂಭಿಸಿ, ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ಕಾರ್ಯಕ್ರಮದಲ್ಲಿ ಲ್ಯಾಂಡ್ ಆರ್ಮಿ (ಭೂ ಸೇನಾ ನಿಗಮ) ಇಲಾಖೆಯ ಅಧಿಕಾರಿಗಳು, ಇಂಜಿನಿಯರ್‌ಗಳು ಹಾಗೂ ಸ್ಥಳೀಯ ಮುಖಂಡರಾದ ಗಿರಿಮಲ್ಲನ್ ಗೌಡ, ಮುದಕಪ್ಪ ನಾಯಕ, ನಾಗಬೋಷಣ, ಪರಶುರಾಮ ಕೆಂಭಾವಿ, ಸಿದ್ದು ಬಡಿಗೇರ್, ಮಂಜುನಾಥ್ ಗೌಡ ಸೇರಿದಂತೆ ಬಿಜೆಪಿಯ ಹಲವು ಮುಖಂಡರು ಉಪಸ್ಥಿತರಿದ್ದರು.ಸ್ಥಳೀಯರು ಈ ರಸ್ತೆ ಕಾಮಗಾರಿಯಿಂದ ಸಂಚಾರ ಸುಗಮವಾಗುವುದಲ್ಲದೆ, ವಾರ್ಡ್‌ನ ಅಭಿವೃದ್ಧಿಗೆ ಹೆಚ್ಚಿನ ಉತ್ತೇಜನ ದೊರೆಯಲಿದೆ ಎಂದು ಅಭಿಪ್ರಾಯಪಟ್ಟರು.
