Sunday, May 10, 2026
Homeಜಿಲ್ಲಾ ಸುದ್ದಿಗಳುರೈತರ ಬದುಕು ಹಸನಾಗಲು ನೀರು, ವಿದ್ಯುತ್ ಹಾಗೂ ಶಿಕ್ಷಣ ಅನಿವಾರ್ಯ: ಶಾಸಕ ಲಕ್ಷ್ಮಣ ಸವದಿತೆಲಸಂಗ ಗ್ರಾಮದಲ್ಲಿ...

ರೈತರ ಬದುಕು ಹಸನಾಗಲು ನೀರು, ವಿದ್ಯುತ್ ಹಾಗೂ ಶಿಕ್ಷಣ ಅನಿವಾರ್ಯ: ಶಾಸಕ ಲಕ್ಷ್ಮಣ ಸವದಿತೆಲಸಂಗ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ

ಅಥಣಿ: “ರೈತರಿಗೆ ಸಮರ್ಪಕ ನೀರು, ವಿದ್ಯುತ್, ರಸ್ತೆ ಹಾಗೂ ಗುಣಮಟ್ಟದ ಶಿಕ್ಷಣ ನೀಡಿದರೆ ಮಾತ್ರ ಅವರ ಬದುಕು ಹಸನಾಗಲು ಸಾಧ್ಯ. ಈ ನಿಟ್ಟಿನಲ್ಲಿ ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ನಮ್ಮ ಮೂಲ ಗುರಿಯಾಗಿದೆ,” ಎಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಶಾಸಕ ಲಕ್ಷ್ಮಣ ಸವದಿ ಹೇಳಿದರು.
ತಾಲೂಕಿನ ತೆಲಸಂಗ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಸಮಾರಂಭವನ್ನು ನೆರವೇರಿಸಿ ಅವರು ಮಾತನಾಡುತ್ತಿದ್ದರು.

ಗ್ರಾಮದ ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲು 2×20 MVA ಸಾಮರ್ಥ್ಯದ 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರಕ್ಕೆ ಭೂಮಿ ಪೂಜೆ ನೆರವೇರಿಸಿದ ಶಾಸಕರು, “ತಾಲೂಕಿನಲ್ಲಿ ಈಗಾಗಲೇ ಸವದಿ, ಯಲ್ಲಡಗಿ ಮತ್ತು ತೆಲಸಂಗದಲ್ಲಿ ಕೇಂದ್ರಗಳು ಆರಂಭವಾಗಿವೆ. ಸಂಕೋನಟ್ಟಿ ಹಾಗೂ ಅಥಣಿ ಗ್ರಾಮೀಣ ಭಾಗ ಸೇರಿ ಒಟ್ಟು 5 ಕೇಂದ್ರಗಳು ಮಂಜೂರಾಗಿವೆ. ಮುಂದಿನ ದಿನಗಳಲ್ಲಿ ರೈತರಿಗೆ ಹಗಲು ವೇಳೆ 7-8 ಗಂಟೆ ವಿದ್ಯುತ್ ನೀಡಲು ಯಲ್ಲಡಗಿ ಮತ್ತು ಕೊಕಟನೂರ ಗ್ರಾಮಗಳಲ್ಲಿ 120 ಮೆಗಾವ್ಯಾಟ್ ಸಾಮರ್ಥ್ಯ ಉಳ್ಳ 2 ಸೋಲಾರ್ ಪಾರ್ಕ್ ಹಾಗೂ ಕೊಕಟನೂರದಲ್ಲಿ ಪ್ರತ್ಯೇಕ 220 ಮೆಗಾವ್ಯಾಟ್ ವಿದ್ಯುತ್ ಘಟಕ ಸ್ಥಾಪಿಸಲು ಉದ್ದೇಶಿಸಲಾಗಿದೆ,” ಎಂದರು.

“ತೆಲಸಂಗದಲ್ಲಿ 67.28 ಗುಂಟೆ ಜಾಗದಲ್ಲಿ ನೂತನ ಕೆರೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಕೊಟ್ಟಲಗಿಯಲ್ಲಿ 4 ಹಾಗೂ ಕೇಸ್ಕರ್ ದಡ್ಡಿಯಲ್ಲಿ ಒಂದು ಕೆರೆ ಸೇರಿದಂತೆ ಎಲ್ಲೆಲ್ಲಿ ಸರ್ಕಾರಿ ಜಾಗವಿದೆಯೋ ಅಲ್ಲೆಲ್ಲ ಕೆರೆ ನಿರ್ಮಿಸಲಾಗುವುದು. ಅಮ್ಮಾಜೇಶ್ವರಿ ಯೋಜನೆಯನ್ನು ಜೂನ್ ಅಥವಾ ಜುಲೈನಲ್ಲಿ ಪ್ರಾಯೋಗಿಕವಾಗಿ ಚಾಲನೆ ಮಾಡಿ ಕೆರೆಗಳನ್ನು ತುಂಬಿಸಲಾಗುವುದು. ಇದರಿಂದ ಅಂತರ್ಜಲ ಮಟ್ಟ ಹೆಚ್ಚಿ ರೈತರಿಗೆ ಅನುಕೂಲವಾಗಲಿದೆ,” ಎಂದು ತಿಳಿಸಿದರು. ಇದಲ್ಲದೆ, ತಾಲೂಕಿಗೆ 1000 ಬೋರವೆಲ್ ಕೊರೆಯುವ ಯೋಜನೆಗೆ ಮಂಜೂರಾತಿ ಸಿಕ್ಕಿದೆ ಎಂದು ಮಾಹಿತಿ ನೀಡಿದರು.

“ಮುಂದಿನ ದಿನಗಳಲ್ಲಿ ಕೃಷಿಯಲ್ಲಿ ಎಐ (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನ ಬಳಕೆಗೆ ಬರಲಿದೆ. ನಮ್ಮ ಮಕ್ಕಳು ಇದಕ್ಕೆ ಸಜ್ಜಾಗಲು ಕನ್ನಡದ ಜೊತೆಗೆ ಇಂಗ್ಲಿಷ್ ಭಾಷೆಯೂ ಅಗತ್ಯ. ಈ ಕಾರಣಕ್ಕೆ 11 ಹೊಸ ಹೈಸ್ಕೂಲ್‌ಗಳಲ್ಲಿ ಇಂಗ್ಲಿಷ್ ಬೋಧನೆ ಆರಂಭಿಸಲಾಗುತ್ತಿದೆ. ಗ್ರಾಮೀಣ ಮಕ್ಕಳಿಗೆ ಗ್ರಾಮದಲ್ಲೇ ಗುಣಮಟ್ಟದ ಶಿಕ್ಷಣ ಸಿಗಬೇಕೆಂಬ ಉದ್ದೇಶದಿಂದ ಮೂರು ಕಡೆ ಹೊಸ ಪಿಯುಸಿ ಕಾಲೇಜುಗಳನ್ನು ಈ ವರ್ಷವೇ ಆರಂಭಿಸಲಾಗುವುದು,” ಎಂದರು.

ಇದೇ ಸಂದರ್ಭದಲ್ಲಿ ನೂತನವಾಗಿ ನಿರ್ಮಿಸಲಾದ ಕಂಬಿ ಮಲ್ಲಯ್ಯ ಸಮುದಾಯ ಭವನ ಹಾಗೂ ಬಾಬು ಜಗಜೀವನರಾಮ ಸಮುದಾಯ ಭವನಗಳನ್ನು ಉದ್ಘಾಟಿಸಲಾಯಿತು. ಜೊತೆಗೆ ವಾಲ್ಮೀಕಿ ಸಮುದಾಯ ಭವನ ಹಾಗೂ ತೆಲಸಂಗ-ಐಗಳಿ ರಸ್ತೆ ಸುಧಾರಣಾ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಲಾಯಿತ.

ಕಾರ್ಯಕ್ರಮದಲ್ಲಿ ಸಿದ್ರಾಯ ಯಲ್ಲಡಗಿ, ಶಂಕರ ನೇಮಗೌಡ, ಅರವಿಂದ ಗುಂಡುಡಿ, ಶಿವು ಗುಡ್ಡಾಪುರ, ಗುರು ದಾಸ್ಯಾಳ, ಅಶೋಕ್ ಪಾಟಿಲ, ಶೋಭಾ ಮಾಳಿ, ಡಿ.ಬೀ. ತಕ್ಕಣವರ, ಅಮೋಘ ಸಿದ್ದ ಕೊಬ್ರಿ, ಸಂತೋಷ ಸಾವಡಕರ, ಕಲ್ಮೇಶ್ ಮಡ್ಡಿ, ಭಾರತಿ ಲೋಕಂಡೆ, ಕೆಪಿಟಿಸಿಎಲ್ ಅಧಿಕಾರಿ ಮಂಜಪ್ಪ ಅಪ್ಪಣ್ಣವರ, ವೀರಣ್ಣ ವಾಲಿ, ಪ್ರವೀಣ ಹುಣಸಿಕಟ್ಟಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಶ್ರೀಶೈಲ ಶಿಲೆಪ್ಪಗೋಳ ಸ್ವಾಗತಿಸಿದರು. ನ್ಯಾಯವಾದಿ ಹಾಗೂ ತೆಲಸಂಗ ಬ್ಲಾಕ್ ಅಧ್ಯಕ್ಷ ಅಮೋಘ ಸಿದ್ದ ಕೊಬ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು.


ರೈತರು ಒಂದು ವರ್ಷ ಕಾಲ ಪಟ್ಟ ಕಷ್ಟದ ಪ್ರತಿಫಲ ಪಡೆಯುವ ಸಮಯದಲ್ಲಿ ತೂಕದಲ್ಲಿ ಮೋಸ ಮಾಡುವುದು ಅಕ್ಷಮ್ಯ ಅಪರಾಧ. ಹಗಲು ರಾತ್ರಿ ಎನ್ನದೆ ದುಡಿಯುವ ರೈತನ ಬದುಕಿನ ಜೊತೆ ಚೆಲ್ಲಾಟವಾಡಬಾರದು. ಕೆಲವು ಕಾರ್ಖಾನೆಗಳಲ್ಲಿ ತೂಕದ ಯಂತ್ರಗಳಲ್ಲಿ (ವೇಬ್ರಿಡ್ಜ್) ತಾಂತ್ರಿಕ ಕೈಚಳಕದ ಮೂಲಕ ರೈತರಿಗೆ ಸಿಗಬೇಕಾದ ನ್ಯಾಯಯುತ ಹಣವನ್ನು ಕಸಿದುಕೊಳ್ಳಲಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಿವೆ. ಇದನ್ನು ಕೂಡಲೇ ಸರಿಪಡಿಸಿಕೊಳ್ಳಬೇಕು,”

ಲಕ್ಷ್ಮಣ ಸವದಿ
ರಾಜ್ಯ ಸರ್ಕಾರದ ಮಾಜಿ ಉಪ ಮುಖ್ಯಮಂತ್ರಿಗಳು ಹಾಗೂ ಶಾಸಕರು ಮತಕ್ಷೇತ್ರ ಅಥಣಿ

ಹೆಚ್ಚಿನ ಸುದ್ದಿ