Wednesday, April 1, 2026
Homeಟಾಪ್ ನ್ಯೂಸ್ರಾಜ್ಯ ಸರ್ಕಾರದಿಂದ ಗುತ್ತಿಗೆ ನೌಕರರಿಗೆ 'ಬಿಗ್ ಶಾಕ್': ಟೆಂಡರ್ ಅವಧಿ ಮುಗಿದ ತಕ್ಷಣ ಕೆಲಸದಿಂದ ವಜಾ!

ರಾಜ್ಯ ಸರ್ಕಾರದಿಂದ ಗುತ್ತಿಗೆ ನೌಕರರಿಗೆ ‘ಬಿಗ್ ಶಾಕ್’: ಟೆಂಡರ್ ಅವಧಿ ಮುಗಿದ ತಕ್ಷಣ ಕೆಲಸದಿಂದ ವಜಾ!

ರಾಜ್ಯದ ವಿವಿಧ ಸರ್ಕಾರಿ ಇಲಾಖೆಗಳು ಹಾಗೂ ನಿಗಮ-ಮಂಡಳಿಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಲಕ್ಷಾಂತರ ನೌಕರರಿಗೆ ರಾಜ್ಯ ಸರ್ಕಾರವು ಬಿಗ್ ಶಾಕ್ ನೀಡಿದೆ. ಟೆಂಡರ್ ಅಥವಾ ಒಪ್ಪಂದದ ಅವಧಿ ಮುಗಿದ ಮರುಕ್ಷಣವೇ ಅಂತಹ ಸಿಬ್ಬಂದಿಯನ್ನು ಯಾವುದೇ ಮುನ್ಸೂಚನೆ ಇಲ್ಲದೆ ಕೆಲಸದಿಂದ ಬಿಡುಗಡೆಗೊಳಿಸುವಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ.

ಅಧಿಕಾರಿಗಳಿಗೆ ಎಚ್ಚರಿಕೆ: ಜೇಬಿನಿಂದಲೇ ದಂಡ!

ಈ ಹೊಸ ಆದೇಶದ ಪ್ರಕಾರ, ನಿಯಮ ಮೀರಿ ಹಳೆಯ ಸಿಬ್ಬಂದಿಯನ್ನು ಕೆಲಸದಲ್ಲಿ ಮುಂದುವರಿಸಿದರೆ, ಅಂತಹ ನೌಕರರಿಗೆ ಪಾವತಿಸುವ ವೇತನವನ್ನು ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರ ಸ್ವಂತ ಜೇಬಿನಿಂದಲೇ ವಸೂಲಿ ಮಾಡಲಾಗುವುದು ಎಂದು ಸರ್ಕಾರ ಎಚ್ಚರಿಸಿದೆ. ಆರ್ಥಿಕ ಶಿಸ್ತು ಕಾಪಾಡುವ ನಿಟ್ಟಿನಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ಪ್ರಮುಖ ಅಂಶಗಳು:

ಯಾರಿಗೆ ಸೂಚನೆ?: ಎಲ್ಲಾ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಇಲಾಖೆ ಮುಖ್ಯಸ್ಥರು ಮತ್ತು ಜಿಲ್ಲಾಧಿಕಾರಿಗಳಿಗೆ ಈ ಸೂಚನೆ ಅನ್ವಯಿಸುತ್ತದೆ.ಒಪ್ಪಂದದ ಅವಧಿ ಮುಗಿದ ದಿನವೇ ಸೇವೆ ಸ್ವಯಂಚಾಲಿತವಾಗಿ ಕೊನೆಗೊಳ್ಳುತ್ತದೆ. ಇದಕ್ಕಾಗಿ ಪ್ರತ್ಯೇಕ ನೋಟಿಸ್ ನೀಡುವ ಅಗತ್ಯವಿಲ್ಲ.ಹೊರಗುತ್ತಿಗೆ ನೌಕರರು ತಮ್ಮ ಸೇವೆಯನ್ನು ಕಾಯಂಗೊಳಿಸುವಂತೆ ಅಥವಾ ಮುಂದುವರಿಸುವಂತೆ ಕೇಳುವ ಕಾನೂನಾತ್ಮಕ ಹಕ್ಕನ್ನು ಹೊಂದಿರುವುದಿಲ್ಲ ಎಂದು ಹೈಕೋರ್ಟ್ ತೀರ್ಪುಗಳನ್ನು ಉಲ್ಲೇಖಿಸಿ ಸರ್ಕಾರ ಸ್ಪಷ್ಟಪಡಿಸಿದೆ.

ಯಾವ ಇಲಾಖೆಯಲ್ಲಿ ಎಷ್ಟು ಹೊರಗುತ್ತಿಗೆ ನೌಕರರು?

ವರದಿಯ ಪ್ರಕಾರ ಒಟ್ಟು 96,844 ಹೊರಗುತ್ತಿಗೆ ನೌಕರರಿದ್ದು, ಪ್ರಮುಖ ಇಲಾಖೆಗಳ ವಿವರ ಹೀಗಿದೆ:

ಕೃಷಿ ಇಲಾಖೆ: 15,824

ಪಶುಸಂಗೋಪನೆ: 15,376

ಹಿಂದುಳಿದ ವರ್ಗಗಳ ಕಲ್ಯಾಣ: 11,424

ಸಹಕಾರ ಇಲಾಖೆ: 6,511

ಆರೋಗ್ಯ ಇಲಾಖೆ: 2,286

ಈ ಆದೇಶದಿಂದಾಗಿ ವರ್ಷಗಳಿಂದ ಕೆಲಸ ಮಾಡುತ್ತಾ “ಮುಂದೆಂದಾದರೂ ಖಾಯಂ ಆಗಬಹುದು” ಎಂಬ ನಿರೀಕ್ಷೆಯಲ್ಲಿದ್ದ ಲಕ್ಷಾಂತರ ನೌಕರರ ಕನಸಿಗೆ ತಣ್ಣೀರು ಸುರಿದಂತಾಗಿದೆ. ಇನ್ನು ಮುಂದೆ ಹೊಸ ಟೆಂಡರ್ ಪ್ರಕ್ರಿಯೆಯ ಮೂಲಕವೇ ನೇಮಕಾತಿ ನಡೆಯಲಿದ್ದು, ಹಳೆಯ ಸಿಬ್ಬಂದಿಗೆ ಆದ್ಯತೆ ನೀಡುವ ಯಾವುದೇ ಬಾಧ್ಯತೆ ಸರ್ಕಾರಕ್ಕಿರುವುದಿಲ್ಲ.

ಹೆಚ್ಚಿನ ಸುದ್ದಿ