Thursday, May 21, 2026
Homeಜಿಲ್ಲಾ ಸುದ್ದಿಗಳುಮುಂಡಗೋಡ ತಾಲೂಕಿಗೆ ಅನಿರೀಕ್ಷಿತ ಭೇಟಿ ನೀಡಿದ ಜಿಪಂ ಸಿಇಒ ಡಾ. ದಿಲೀಷ್ ಶಸಿ

ಮುಂಡಗೋಡ ತಾಲೂಕಿಗೆ ಅನಿರೀಕ್ಷಿತ ಭೇಟಿ ನೀಡಿದ ಜಿಪಂ ಸಿಇಒ ಡಾ. ದಿಲೀಷ್ ಶಸಿ

ಮುಂಡಗೋಡ : ಉತ್ತರ ಕನ್ನಡ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ದಿಲೀಷ್ ಶಸಿ ಅವರು ಗುರುವಾರ ಮುಂಡಗೋಡ ತಾಲೂಕಿನಲ್ಲಿ ವಿವಿಧ ಗ್ರಾಮ ಪಂಚಾಯತ್, ಸರ್ಕಾರಿ ಕಟ್ಟಡ ಹಾಗೂ ಕಾಮಗಾರಿ ಸ್ಥಳಗಳಿಗೆ ಅನಿರೀಕ್ಷಿತ ಭೇಟಿ ನೀಡಿ, ಪರಿಶೀಲಿಸಿದರು.

ಮೊದಲು ತಾಲೂಕಿನ ಮಳಗಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಸ್ಮಶಾನಕಟ್ಟೆ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳ ಪರಿಶೀಲಿಸಿ, ಕೂಲಿಕಾರರೊಂದಿಗೆ ಸಂವಾದ ನಡೆಸಿದರು. ಸ್ಥಳೀಯವಾಗಿ ಖಾಸಗಿ ಕೆಲಸಗಳಲ್ಲಿ ನರೇಗಾ ಯೋಜನೆಗಿಂತಲೂ ಕೂಲಿ ದರ ಹೆಚ್ಚಿದ್ದು, ಯೋಜನೆಯಡಿ ಕೂಲಿ ದರವನ್ನು ಇನ್ನೂ ಹೆಚ್ಚಿಸಬೇಕು ಮತ್ತು ಬೇಸಿಗೆಯಲ್ಲಿ ಕೆಲಸದ ಪ್ರಮಾಣದಲ್ಲಿ ರಿಯಾಯಿತಿ ನೀಡಬೇಕೆಂಬ ಕೂಲಿಕಾರರ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿ, ಆಯುಕ್ತಾಲಯದ ಗಮನಕ್ಕೆ ತರುವುದಾಗಿ ತಿಳಿಸಿದರು.

ಬಳಿಕ ಮಳಗಿ ಹಾಗೂ ಪಾಳಾ ಗ್ರಾಮ ಪಂಚಾಯತಿ ಕಛೇರಿಗಳಿಗೆ ಭೇಟಿ ನೀಡಿ, ವಿವಿಧ ಯೋಜನೆಗಳ ಪ್ರಗತಿ ಮತ್ತು ಪ್ರಮುಖ ಕಡತಗಳನ್ನು ಪರಿಶೀಲಿಸಿ, ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು. ಇದೇ ವೇಳೆ ಗ್ರಂಥಾಲಯ, ಕೂಸಿನ ಮನೆಗಳನ್ನು ಪರಿವೀಕ್ಷಣೆ ಮಾಡಿದರು. ಬಳಿಕ ಪಾಳಾ ಐಟಿಐ ಕಾಲೇಜಿಗೆ ಭೇಟಿ ನೀಡಿ, ಆಡಳಿತ ಕಛೇರಿ, ಲ್ಯಾಬ್, ಬೋಧನಾ ಕೊಠಡಿ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಪರಿಶೀಲಿಸಿದರು.

ತದನಂತರ ಇಂದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಪ್ಪ ಗ್ರಾಮದಲ್ಲಿ ಬೂದು ನೀರು ‌ನಿರ್ವಹಣೆಗಾಗಿ ಸಮುದಾಯ ಮಟ್ಟದಲ್ಲಿ ಚರಂಡಿಯಲ್ಲಿ ನೀರು ಸಂಸ್ಕರಣಾ ಘಟಕ ವೀಕ್ಷಣೆ ಮಾಡಿ, ಉತ್ತಮ ರೀತಿಯಲ್ಲಿ ನಿರ್ವಹಿಸುವಂತೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ತಾಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ ಟಿ.ವಾಯ್. ದಾಸನಕೊಪ್ಪ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಹಾಯಕ ಅಭಿಯಂತರರಾದ ದೀಪಾ ಎಸ್ ಶೆಡಗೇರಿ, ಕಿರಿಯ ಅಭಿಯಂತರರಾದ ಪ್ರದೀಪ್ ಭಟ್, ಸಂಬಂಧಪಟ್ಟ ಗ್ರಾಪಂ ಪಿಡಿಒ, ನರೇಗಾ ತಾಂತ್ರಿಕ ಸಿಬ್ಬಂದಿ ಉಪಸ್ಥಿತರಿದ್ದರು. ಐಇಸಿ ಸಂಯೋಜಕರುತಾಪಂ ಮುಂಡಗೋಡ

ಬೇಟಿ ಮಾಡಿದ ಚಿತ್ರಗಳು

ವರದಿಗಾರರು : ಕರಬಸಯ್ಯ ತೋಟಯ್ಯನವರ.

ಹೆಚ್ಚಿನ ಸುದ್ದಿ