ಸಾಗರ:ಸಾಗರದ ಗಾಂಧಿನಗರದಲ್ಲಿದ್ದ ಹಳೆಯ ಬಾವಿ ಮುಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಹರತಾಳು ಹಾಲಪ್ಪ ಅವರ ಆರೋಪಗಳಿಗೆ ಹಾಲಿ ಶಾಸಕ ಬೇಳೂರು ಗೋಪಾಲಕೃಷ್ಣ ವಾಗ್ದಾಳಿ ನಡೆಸಿದ್ದು, ಸರಕಾರಿ ಬಾವಿಗಳನ್ನೇ ನುಂಗಿ ಸೇಲ್ ಸರ್ಟಿಫಿಕೇಟ್ ಮಾಡಿಸಿಕೊಂಡವರ ನೈಜ ದಾಖಲೆಗಳನ್ನು ಶೀಘ್ರವೇ ಬಯಲಿಗೆಳೆಯುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.
ವಾಸ್ತು ದೋಷಕ್ಕಾಗಿ ಬಾವಿ ಮುಚ್ಚಲಾಗಿದೆ ಎಂಬ ಹಾಲಪ್ಪ ಅವರ ಆರೋಪವನ್ನು ಸಂಪೂರ್ಣವಾಗಿ ತಳ್ಳಿಹಾಕಿದ ಶಾಸಕರು, ಸಾರ್ವಜನಿಕ ನೈರ್ಮಲ್ಯ ಮತ್ತು ಸ್ವಚ್ಛತೆಯ ಹಿತದೃಷ್ಟಿಯಿಂದ ಖಾಸಗಿ ಸಂಘದ ಮನವಿಯಂತೆ ಬಾವಿಯನ್ನು ಮುಚ್ಚಲಾಗಿದೆ. ಸತ್ತ ಪ್ರಾಣಿಗಳು ಬಿದ್ದು ಗಬ್ಬೆದ್ದು ನಾರುತ್ತಿದ್ದ ಬಾವಿ ಮುಚ್ಚಿ, ಸಾರ್ವಜನಿಕರಿಗೆ ಪರ್ಯಾಯ ನೀರಿನ ವ್ಯವಸ್ಥೆಯನ್ನೂ ಮಾಡಿಕೊಡಲಾಗಿದೆ” ಎಂದು ಸ್ಪಷ್ಟನೆ ನೀಡಿದ್ದಾರೆ.
ಇದೇ ವೇಳೆ, ಶಾಸಕರ ಮನೆಯ ಪಕ್ಕದ ಬಾವಿ ಮುಚ್ಚಿದ್ದನ್ನು ವಿರೋಧಿಸಿ ಬೆಂಬಲಿಗರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಹರತಾಳು ಹಾಲಪ್ಪ, ಕುಡಿಯುವ ನೀರಿನ ನೈಸರ್ಗಿಕ ಮೂಲವನ್ನು ನಾಶಪಡಿಸಲಾಗಿದೆ ಎಂದು ಆರೋಪಿಸಿ, ಶಾಸಕ ಬೇಳೂರು ವಿರುದ್ಧ ಜಿಲ್ಲಾಧಿಕಾರಿ ಹಾಗೂ ಲೋಕಾಯುಕ್ತಕ್ಕೆ ದೂರು ನೀಡಲು ನಿರ್ಧರಿಸಿದ್ದಾರೆ. ಮತ್ತೊಂದೆಡೆ, ಸದರಿ ಜಾಗವು ವಿವೇಕಾನಂದ ಗ್ರಂಥಾಲಯ ಟ್ರಸ್ಟ್‌ಗೆ ಸೇರಿದ್ದಾಗಿದ್ದು, ಈ ಹಿಂದೆ ಬಾವಿ ಮುಚ್ಚಲು ಬಂದಾಗ ಸಾರ್ವಜನಿಕರು ವಿರೋಧಿಸಿದ್ದರು ಎಂದು ಸ್ಥಳೀಯ ಸಾಮಾಜಿಕ ಕಾರ್ಯಕರ್ತ ನಾರಾಯಣ ಮೂರ್ತಿ ತಿಳಿಸಿದ್ದು, ಸಾಗರ ರಾಜಕೀಯದಲ್ಲಿ ಈಗ ಬಾವಿ ಪಾಲಿಟಿಕ್ಸ್ ಕಾವು ಪಡೆದುಕೊಂಡಿದೆ.
