Friday, March 27, 2026
HomeUncategorizedಬಾಲಕರ ಅಪಹರಣಕ್ಕೆ ವಿಫಲ ಪ್ರಯತ್ನ: ಇಬ್ಬರು ಮಕ್ಕಳನ್ನು ರಕ್ಷಿಸಿದ ಧೈರ್ಯಶಾಲಿ ಮಹಿಳೆ

ಬಾಲಕರ ಅಪಹರಣಕ್ಕೆ ವಿಫಲ ಪ್ರಯತ್ನ: ಇಬ್ಬರು ಮಕ್ಕಳನ್ನು ರಕ್ಷಿಸಿದ ಧೈರ್ಯಶಾಲಿ ಮಹಿಳೆ

ಮುಂಡಗೋಡು: ತಾಲೂಕಿನ ನ್ಯಾಸಗಿ ಡ್ಯಾಮ್ ಗ್ರಾಮದಲ್ಲಿ ಇಬ್ಬರು ಬಾಲಕರನ್ನು ಅಪಹರಿಸಲು ಕಳ್ಳರು ನಡೆಸಿದ ಪ್ರಯತ್ನ ಗ್ರಾಮಸ್ಥರ ಎಚ್ಚರಿಕೆ ಮತ್ತು ಮಕ್ಕಳ ಚಾಕಚಕ್ಯತೆಯಿಂದ ವಿಫಲಗೊಂಡಿದೆ.

ಶಿಗ್ಗಾವಿ ಮತ್ತು ಮುಂಡಗೋಡ ಸಂಪರ್ಕಿಸುವ ಅರಣ್ಯ ಪ್ರದೇಶದ ಅರಟಾಳ–ದುಂಡಸಿ ಮಾರ್ಗದಲ್ಲಿ ಈ ಘಟನೆ ನಡೆದಿದೆ. ಸ್ಕೂಟಿಯಲ್ಲಿ ಬಂದಿದ್ದ ಅಪಹರಣಕಾರರು ಇಬ್ಬರು ಬಾಲಕರನ್ನು ಹಿಡಿದು ಕಾರಿನೊಳಗೆ ಎಳೆಯಲು ಯತ್ನಿಸಿದರು. ಈ ವೇಳೆ ಮಕ್ಕಳು ಧೈರ್ಯ ತೋರಿಸಿ ಅಪಹರಣಕಾರರ ಕೈಗಳನ್ನು ಬಾಯಿಯಿಂದ ಕಚ್ಚಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು.

ಅದೇ ಸಮಯದಲ್ಲಿ ಹತ್ತಿರದ ಹೊಲದಲ್ಲಿ ಕೃಷಿ ಕಾರ್ಯದಲ್ಲಿ ತೊಡಗಿದ್ದ ಮಹಿಳೆ ಮಕ್ಕಳ ಕಿರುಚಾಟವನ್ನು ಕೇಳಿ ಸ್ಥಳಕ್ಕೆ ಧಾವಿಸಿದರು. ಓನಕೆ ಒಬವ್ವನಂತೆ ಧೈರ್ಯದಿಂದ ಎದುರಿಸಿದ ಆ ಮಹಿಳೆಯನ್ನು ಕಂಡ ಅಪಹರಣಕಾರರು ತಕ್ಷಣವೇ ಅಲ್ಲಿಂದ ಪರಾರಿಯಾದರು.

ಭಯದಿಂದ ನಡುಗುತ್ತಿದ್ದ ಇಬ್ಬರು ಮಕ್ಕಳು ಸುರಕ್ಷಿತವಾಗಿ ಮನೆ ತಲುಪಿದರು. ಇವರಲ್ಲಿ ಒಬ್ಬ ಬಾಲಕನಿಗೆ ಆಘಾತದಿಂದ ಜ್ವರ ಕಾಣಿಸಿಕೊಂಡಿದೆ ಎಂದು ಪೋಷಕರು ತಿಳಿಸಿದ್ದಾರೆ.

ಈ ಕುರಿತು ಮುಂಡಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.

ಗ್ರಾಮದಲ್ಲಿ ಅಪರಿಚಿತರ ಸಂಚಾರ ಹೆಚ್ಚುತ್ತಿರುವ ಹಿನ್ನೆಲೆ ಸ್ಥಳೀಯರು ಹೆಚ್ಚಿನ ಎಚ್ಚರಿಕೆಯಿಂದ ಇರಬೇಕೆಂದು ಮನವಿ ಮಾಡಿದ್ದಾರೆ.

ಹೆಚ್ಚಿನ ಸುದ್ದಿ