ಸನಾತನ ಪ್ರಾಚೀನ ಪಾರಂಪರಿಕ ವೈದ್ಯ ಪದ್ಧತಿ ಹಾಗೂ ಪಾರಂಪರಿಕ ವೈದ್ಯರನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸರ್ಕಾರ ಸ್ಪಷ್ಟ ನೀತಿ ರೂಪಿಸಬೇಕೆಂದು ಕಲ್ಯಾಣ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ ಆಗ್ರಹಿಸಿದೆ.
ಕಲ್ಯಾಣ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ ಅಧ್ಯಕ್ಷರಾದ ವೈದ್ಯ ಆನಂದ ಡಿ. ಹೇರೂರು ಅವರು, ವಿಜಯಪುರ ನಗರದ ಜನಪ್ರಿಯ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಮನವಿ ಸಲ್ಲಿಸಿ, ಪಾರಂಪರಿಕ ವೈದ್ಯರ ಸಮಸ್ಯೆಗಳನ್ನು ಸದನದಲ್ಲಿ ಪ್ರಸ್ತಾಪಿಸುವಂತೆ ಒತ್ತಾಯಿಸಿದರು.
ಈ ಕುರಿತು ಮಾತನಾಡಿದ ಅವರು, “ಕಲ್ಯಾಣ ಕರ್ನಾಟಕ ಭಾಗದಲ್ಲಿ ಮೂರು ಸಾವಿರಕ್ಕೂ ಅಧಿಕ ಪಾರಂಪರಿಕ ವೈದ್ಯರು ಹಲವು ತಲೆಮಾರುಗಳಿಂದ ಪಾರಂಪರಿಕ ವೈದ್ಯ ಪದ್ಧತಿಯನ್ನು ಅನುಸರಿಸುತ್ತಾ ಸೇವೆ ಸಲ್ಲಿಸುತ್ತಿದ್ದಾರೆ. ಸಣ್ಣ ಕಾಯಿಲೆಯಿಂದ ಹಿಡಿದು ಮರಣಾಂತಿಕ ಕಾಯಿಲೆಗಳವರೆಗೆ ಚಿಕಿತ್ಸೆ ನೀಡುತ್ತಿರುವ ಇವರು, ಆಸ್ಪತ್ರೆಗಳಲ್ಲಿ ಗುಣಮುಖವಾಗದ ಹಲವಾರು ಕಾಯಿಲೆಗಳನ್ನು ಯಶಸ್ವಿಯಾಗಿ ಗುಣಪಡಿಸಿರುವ ದಾಖಲೆಗಳು ನಮ್ಮ ಬಳಿ ಇವೆ” ಎಂದು ತಿಳಿಸಿದರು.
ಪಾರಂಪರಿಕ ವೈದ್ಯ ಪದ್ಧತಿ ಸನಾತನ ಹಾಗೂ ಪ್ರಾಚೀನ ವೈದ್ಯ ಪದ್ಧತಿಯಾಗಿದ್ದು, ಇದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಸರ್ಕಾರದ ಮೇಲಿದೆ. ಪಾರಂಪರಿಕ ವೈದ್ಯರಿಗೆ ಮಾನ್ಯತೆ ನೀಡಬೇಕು ಹಾಗೂ ಅವರ ಸೇವೆಯನ್ನು ಅಧಿಕೃತವಾಗಿ ಗುರುತಿಸಬೇಕು ಎಂದು ಅವರು ಒತ್ತಾಯಿಸಿದರು.
“ಪಾರಂಪರಿಕ ವೈದ್ಯ ಪದ್ಧತಿ ಉಳಿವಿಗಾಗಿ ಹಾಗೂ ಪಾರಂಪರಿಕ ವೈದ್ಯರ ಹಕ್ಕುಗಳ ರಕ್ಷಣೆಗೆ ಸದನದಲ್ಲಿ ಧ್ವನಿಯೆತ್ತುವಂತೆ ನಾವು ಕಳಕಳಿಯ ಮನವಿ ಮಾಡುತ್ತಿದ್ದೇವೆ. ಕಲ್ಯಾಣ ಕರ್ನಾಟಕದ ಎಲ್ಲಾ ಪಾರಂಪರಿಕ ವೈದ್ಯರು ನಿಮ್ಮ ಅಭಿಮಾನಿಗಳಾಗಿದ್ದು, ತಮ್ಮ ಆಶಯದಂತೆ ಈ ವಿಷಯವನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸುವಿರಿ ಎಂಬ ವಿಶ್ವಾಸವಿದೆ” ಎಂದು ವೈದ್ಯ ಆನಂದ ಡಿ. ಹೇರೂರು ಹೇಳಿದರು.
