ಮುಂಡಗೋಡ: ಲೊಯೋಲ ವಿಕಾಸ ಕೇಂದ್ರ, ಮುಂಡಗೋಡದ ಅಧೀನದಲ್ಲಿರುವ ನವಸ್ಪೂರ್ತಿ ಹಾಗೂ ಎಲಿಜಬೆತ್ ವಸತಿನಿಲಯಗಳ ಚಿಣ್ಣರ ಕಲರವ ವಾರ್ಷೀಕೋತ್ಸವ ಹಾಗೂ ಪಾಲಕರ ಸಭೆ ಶನಿವಾರದಂದು ಲೊಯೋಲ ವಿಕಾಸ ಕೇಂದ್ರದ ಆವರಣದಲ್ಲಿ ಅತ್ಯಂತ ಉತ್ಸಾಹ ಹಾಗೂ ಸಂಭ್ರಮದಿಂದ ನಡೆಯಿತು.
ಮುಂಡಗೋಡ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗಳಾದ ಶ್ರೀ ಸಂತೋಷಕುಮಾರ್ ಹಾಳಕಲ್ಲಾಪುರ ಅವರು ದೀಪಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಅಧಿಕೃತವಾಗಿ ಉದ್ಘಾಟಿಸಿದರು. “ಲೊಯೋಲ ವಿಕಾಸ ಕೇಂದ್ರವು ಕೇವಲ ಒಂದು ಸಂಸ್ಥೆಯಾಗದೇ, ಬಡ ಹಾಗೂ ಹಿಂದುಳಿದ ಮಕ್ಕಳ ಬದುಕಿಗೆ ಬೆಳಕು ನೀಡುತ್ತಿರುವ ಮಾನವೀಯ ಸೇವಾ ಕೇಂದ್ರವಾಗಿದೆ. ಶಿಕ್ಷಣ, ವಸತಿ ಮತ್ತು ಮೌಲ್ಯಾಧಾರಿತ ಜೀವನವನ್ನು ನೀಡುವ ಮೂಲಕ ಲೊಯೋಲ ಸಂಸ್ಥೆ ಸಮಾಜದ ನಿಜವಾದ ಶಕ್ತಿಯಾಗಿದೆ. ಇಂತಹ ಸೇವೆ ಇತರ ಸಂಸ್ಥೆಗಳಿಗೆ ಮಾದರಿಯಾಗಿದೆ” ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದ ಮುಖ್ಯ ಉದ್ದೇಶ ವಸತಿನಿಲಯ ಮತ್ತು ಪಾಲಕರ ನಡುವಿನ ಸಂಬಂಧವನ್ನು ಮತ್ತಷ್ಟು ಬಲಪಡಿಸುವುದು, ಜೊತೆಗೆ ಮಕ್ಕಳ ಶೈಕ್ಷಣಿಕ ಪ್ರಗತಿ, ಶಿಸ್ತು, ಆರೋಗ್ಯ ಹಾಗೂ ದೈನಂದಿನ ಜೀವನದ ಕುರಿತು ಪಾಲಕರಿಗೆ ನೇರ ಮಾಹಿತಿಯನ್ನು ನೀಡುವುದು, ಲೊಯೋಲ ಸಂಸ್ಥೆಯ ಧ್ಯೇಯ, ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ನೀಡುತ್ತಿರುವ ಸೇವೆ ಮತ್ತು ಪಾಲಕರ ಸಹಕಾರದ ಮಹತ್ವವನ್ನು ಲೊಯೋಲ ವಿಕಾಸ ಕೇಂದ್ರದ ನಿರ್ದೇಶಕರಾದ ವಂದನೀಯ ಫಾ. ಅನಿಲ್ ಡಿ’ಸೋಜಾ ಅವರು ಪ್ರಾಸ್ತಾವಿಕ ನುಡಿಯಲ್ಲಿ ವಿವರಿಸಿದರು.
“ಮಕ್ಕಳು ನಾವು ಹೇಳಿದುದನ್ನು ಮಾತ್ರ ಕೇಳುವುದಿಲ್ಲ, ನಾವು ಮಾಡುವುದನ್ನು ನೋಡಿ ಕಲಿಯುತ್ತಾರೆ. ಆದ್ದರಿಂದ ಶಿಕ್ಷಕರು ಮತ್ತು ಪಾಲಕರು ಮಕ್ಕಳಿಗೆ ಮಾದರಿಯಾಗಬೇಕು” ಜೊತೆಗೆ ಲೊಯೋಲ ವಿಕಾಸ ಕೇಂದ್ರವು ಗ್ರಾಮೀಣ ಹಾಗೂ ಹಿಂದುಳಿದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ನೀಡುತ್ತಿರುವ ಅಮೂಲ್ಯ ಕೊಡುಗೆಯನ್ನು ಅವರು ಹೃದಯಪೂರ್ವಕವಾಗಿ ಶ್ಲಾಘಿಸಿದರು. ಪಾಠ್ಯಜ್ಞಾನಕ್ಕೆ ಮಾತ್ರ ಸೀಮಿತವಾಗದೇ, ಮಕ್ಕಳಲ್ಲಿ ಮೌಲ್ಯಗಳು, ಶಿಸ್ತು ಮತ್ತು ಆತ್ಮವಿಶ್ವಾಸ ಬೆಳೆಸುತ್ತಿರುವುದು ಶ್ಲಾಘನೀಯವೆಂದು ಮುಖ್ಯ ಅತಿಥಿಗಳಾಗಿ ಮುಂಡಗೋಡ ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಸುಮಾ ಜಿ. ಅವರು ಅಭಿಪ್ರಾಯಪಟ್ಟರು.
ಮುಂಡಗೋಡ ತಾಲ್ಲೂಕಿನ ಬಡಜನರ ಶಿಕ್ಷಣಕ್ಕೆ ಲೊಯೋಲ ಸಂಸ್ಥೆಯು ತನ್ನನ್ನೆ ಅರ್ಪಿಸಿಕೊಂಡು ಕಾರ್ಯ ನಿರ್ವಹಿಸುತ್ತಿರುವುದರಿಂದ ತಾಲ್ಲೂಕಿನ ಶಿಕ್ಷಣಕ್ಷೇತ್ರದಲ್ಲಿ ಕ್ರಾಂತಿ ಉಂಟಾಗಿದೆ ಮತ್ತು ಇಲ್ಲಿ ಶಿಕ್ಷಣ ಪಡೆಯುತ್ತಿರುವ ಮಕ್ಕಳಿಗೆ ಸಕಲ ವಿಧದ ಸೌಕರ್ಯ ಪಡೆಯುತ್ತಿರುವ ಇಲ್ಲಿನ ಮಕ್ಕಳೆ ಧನ್ಯರು ಎಂದು ಇಂದೂರ ಗ್ರಾಮದ ಮಕ್ಕಳ ಪಾಲಕರು ಮತ್ತು ಮುಂಡಗೋಡ ತಾಲ್ಲೂಕಾ ಗ್ರಾಮ ಪಂಚಾಯತ ಸದಸ್ಯರುಗಳ ಮಹಾಒಕ್ಕೂಟದ ಅಧ್ಯಕ್ಷರಾದ ಶ್ರೀ ಧರ್ಮರಾಜ್ ನಡಗೇರ ನುಡಿದರು.
ಲೊಯೋಲ ವಿಕಾಸ ಕೇಂದ್ರದ ಸಹನಿರ್ದೇಶಕರಾದ ಬ್ರ. ಕಿರಣ್ ಹಾಗೂ ನವಸ್ಪೂರ್ತಿ ವಸತಿನಿಲಯದ ನಿಲಯ ಪಾಲಕಿ ಕು. ಅಕ್ಷತಾ ಅವರು ವಿಡಿಯೋ ಪ್ರದರ್ಶನದ ಮೂಲಕ ವಾರ್ಷಿಕ ವರದಿಯನ್ನು ವಾಚಿಸಿ, ಮಕ್ಕಳ ಶೈಕ್ಷಣಿಕ ಸಾಧನೆ, ಸಹಪಾಠ್ಯ ಚಟುವಟಿಕೆಗಳು ಮತ್ತು ಶಿಸ್ತುಬದ್ಧ ಜೀವನದ ಬಗ್ಗೆ ವಿವರಿಸಿದರು.
ನವಸ್ಪೂರ್ತಿ ವಸತಿನಿಲಯದ ನಿಲಯ ಪಾಲಕಿ ಕು. ಆಕ್ಷತಾ ಅವರು ಸ್ವಾಗತ ಭಾಷಣ ಮಾಡಿದರು. ಎಲಿಜಬೆತ್ ವಸತಿನಿಲಯದ ವಿದ್ಯಾರ್ಥಿನಿಯರಾದ ಕು. ಧರಣಿ ಮತ್ತು ಸಂಗಡಿಗರು ಮನಮುಟ್ಟುವ ಸ್ವಾಗತ ನೃತ್ಯವನ್ನು ಪ್ರದರ್ಶಿಸಿದರು, ಮಕ್ಕಳಿಂದ ಹಾಡು, ನೃತ್ಯ, ನಾಟಕ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶಿತವಾಗಿದ್ದು, ಪಾಲಕರು ಹಾಗೂ ಅತಿಥಿಗಳನ್ನು ಆನಂದದಿಂದ ಮೆರಗುಗೊಳಿಸಿದವು. ಕೊನೆಯಲ್ಲಿ ಕ್ರೀಡೆ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನಡೆಸಲಾಯಿತು.
ಲೊಯೋಲ ವಿಕಾಸ ಕೇಂದ್ರ ಶಿಕ್ಷಣಕ್ಕೆ ಮಹತ್ವ ನೀಡುವುದಲ್ಲದೆ ಮಕ್ಕಳಲ್ಲಿ ಇತರೆ ವ್ಯಕ್ತಿತ್ವ ವಿಕಸನ ಚಟುವಟಿಕೆಗಳಲ್ಲಿ ತೋಡುಗುವಂತೆ ಮಾಡುವುದು ಮಕ್ಕಳ ಬೌದ್ಧಿಕ ಮತ್ತು ಸರ್ವಾಂಗೀಣ ಅಭಿವೃದ್ಧಿಗೆ ಕಾರ್ಯ ನಿರ್ವಹಿಸುತ್ತಿದೆ ಎಂದು ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ ಲೊಯೋಲ ಹಿರಿಯ ಪ್ರಾಥಮಿಕ ಶಾಲೆಯ ನಿರ್ದೇಶಕರಾದ ವಂದನೀಯ ಫಾ. ವಿಜಯರಾಜುರವರು ಮಾತನಾಡಿದರು,
ಈ ಕಾರ್ಯಕ್ರಮದಲ್ಲಿ ಎಲ್.ಸಿ.ಎಚ್.ನ ನಿರ್ದೇಶಕರಾದ ಫಾ. ವಿಲ್ಸನ್ ಮತ್ತು ಸಹನಿರ್ದೇಶಕರಾದ ಸಾನ್ಸನ್, ಎಲ್.ವಿ.ಕೆ. ಹಾನಗಲ್ ನಿರ್ದೇಶಕರಾದ ವಿನ್ಸೆಂಟ್ ಹಾಗೂ ಸಹನಿರ್ದೇಶಕರಾದ ಜೈಸನ್ ಗ್ಲೆನ್ ಪೈಸ್, ಎಲ್.ವಿ.ಕೆ. ಎಸ್.ಡಿ.ಪಿ. ಯೋಜನೆಯ ವಂದನೆಯ ಫಾ. ಅಲ್ವಿನ್ ಡಿ’ಸೋಜ, ಸೆಂಟ್ ರೀಟಾ ಚರ್ಚ್‌ನ ಮುಖ್ಯಸ್ಥರಾದ ವಂದನೆಯ ಫಾ. ಗಿಲ್ಬರ್ಟ್, ಜ್ಯೋತಿ ಕಾನ್ವೆಂಟ್‌ನ ವೈದ್ಯರಾದ ಸಿಸ್ಟರ್ ಗ್ಲಾಡಿಸ್, ಹಾಗೂ ಎಲ್.ವಿ.ಕೆ.ಯ ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆ ಕುಮಾರಿ ಕಾವ್ಯಾ ವಡ್ಡರರವರು ನಿರ್ವಹಿಸಿದರು, ಕು. ರಂಜಿತಾ ಅವರು ವಂದನಾರ್ಪಣೆ ಸಲ್ಲಿಸಿದರು,


