ತೆಲಸಂಗ: ಇತ್ತೀಚೆಗಷ್ಟೇ ನಡೆದ ಪಂಚಮಸಾಲಿ ಸಮಾಜದ ಗುರುಪೀಠದ ಟ್ರಸ್ಟ್ ವಿವಾದದ ಬೆನ್ನಲ್ಲೇ, ಇದೀಗ ರಾಜ್ಯದ ಪ್ರಥಮ ಕುಂಬಾರ ಸಮಾಜದ ಗುರುಪೀಠದಲ್ಲೂ ಭಿನ್ನಮತ
ಸ್ಫೋಟಗೊಂಡಿದೆ. ಟ್ರಸ್ಟ್ ವಿಚಾರವಾಗಿ ಸಮಾಜದ ಮುಖಂಡರು ಎರಡು ಗುಂಪುಗಳಾಗಿ ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿದ್ದರಿಂದ, ಅಥಣಿ ತಾಲೂಕಿನ ತೆಲಸಂಗ ಗ್ರಾಮದ ಕುಂಬಾರ
ಗುರುಪೀಠದಲ್ಲಿ ತೀವ್ರ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಕೊನೆಗೆ ಪೊಲೀಸರ ಮಧ್ಯಪ್ರವೇಶದಿಂದ ಸದ್ಯಕ್ಕೆ ಪರಿಸ್ಥಿತಿ ತಿಳಿಯಾಗಿದೆ.

ತೆಲಸಂಗ ಗ್ರಾಮದ ಕುಂಬಾರ ಗುರುಪೀಠದ ಶ್ರೀಮಠದಲ್ಲಿ ಮೇ 24 ರಂದು ನೂತನ ಕಲ್ಯಾಣ ಮಂಟಪದ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಕುಂಬಾರ
ಸಮುದಾಯದ ಒಂದು ಗುಂಪು ಇಂದು ಸಭೆ ಸೇರಿ ಪತ್ರಿಕಾಗೋಷ್ಠಿಗೆ ಸಜ್ಜಾಗಿತ್ತು. ಮೇ 24ರ ಕಲ್ಯಾಣ ಮಂಟಪ ಉದ್ಘಾಟನಾ ಕಾರ್ಯಕ್ರಮವನ್ನು ಸಮಾಜದ ಎಲ್ಲರಿಗೂ ತಿಳಿಸದೇ
ಏಕಪಕ್ಷೀಯವಾಗಿ ಹಮ್ಮಿಕೊಳ್ಳಲಾಗಿದೆ. ಮಠದ ಆಡಳಿತಕ್ಕಾಗಿ ಎಷ್ಟು ಬಾರಿ ಒತ್ತಾಯಿಸಿದರೂ ಸಮಿತಿ (ಕಮಿಟಿ) ರಚನೆ ಮಾಡುತ್ತಿಲ್ಲ. ಶ್ರೀಮಠದ ಉತ್ತರಾಧಿಕಾರಿಯು ಕಡ್ಡಾಯವಾಗಿ ಕುಂಬಾರ ಸಮಾಜಕ್ಕೆ ಸೇರಿದವರೇ ಆಗಿರಬೇಕು ಎಂಬ ನಿಯಮವನ್ನು ಮಠದ ಬೈಲಾದಲ್ಲಿ (ನಿಯಮಾವಳಿ) ಸೇರಿಸಬೇಕು. ಶ್ರೀಮಠದಲ್ಲಿ ಪೂಜೆ ಪುನಸ್ಕಾರಗಳಿಗೆ ನಿಷೇಧ ಹೇರಲಾಗಿದೆ ಹಾಗೂ ಮಠದ ಕಲ್ಯಾಣ ಮಂಟಪದ ದ್ವಾರಬಾಗಿಲ ಮೇಲಿದ್ದ ಗಣಪತಿಯ ಚಿತ್ರವನ್ನು ಕೆತ್ತಿ
ತೆಗೆಸಲಾಗಿದೆ ಎಂದು ಒಂದು ಗುಂಪು ಆರೋಪಿಸಿತು.
ಒಂದು ಗುಂಪು ಈ ಮೇಲಿನ ಆರೋಪಗಳನ್ನು ಮಾಡಿ ಪತ್ರಿಕಾಗೋಷ್ಠಿ ನಡೆಸಲು ಮುಂದಾದಾಗ, ಕುಂಬಾರ ಗುರುಪೀಠದ ಪೂಜ್ಯರಾದ ಬಸವ ಗುಂಡಯ್ಯ ಸ್ವಾಮೀಜಿ ಹಾಗೂ ಅವರ ಬೆಂಬಲಿಗರು ನೇರವಾಗಿ ಪತ್ರಿಕಾಗೋಷ್ಠಿ ನಡೆಯುತ್ತಿದ್ದ ಸ್ಥಳಕ್ಕೆ ನುಗ್ಗಿದರು.
ವೇದಿಕೆಯ ಮೇಲೆ ಕುರ್ಚಿಗಳನ್ನು ಹಾಕಿ ಆಸೀನರಾದರು. ಈ ವೇಳೆ ಎರಡೂ ಗುಂಪುಗಳ ನಡುವೆ ಜೋರು ವಾಗ್ವಾದ ನಡೆದು, ಪರಿಸ್ಥಿತಿ ಕೈಮೀರುವ ಹಂತ ತಲುಪಿತು. ಸ್ಥಳದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ನಿಯೋಜನೆಗೊಂಡಿದ್ದ ಐಗಳಿ ಪೊಲೀಸ್ ಠಾಣೆಯ ಅಧಿಕಾರಿಗಳು
ಮತ್ತು ಸಿಬ್ಬಂದಿ ತಕ್ಷಣವೇ ಮಧ್ಯಪ್ರವೇಶಿಸಿದರು. ಜಗಳವಾಡುತ್ತಿದ್ದ ಎರಡೂ ಗುಂಪುಗಳನ್ನು ಸಮಾಧಾನಪಡಿಸಿ, ಪರಿಸ್ಥಿತಿಯನ್ನು ಹತೋಟಿಗೆ ತಂದರು.
ದೊಡ್ಡ ಮಟ್ಟದ ಗದ್ದಲದ ನಂತರ ಕೊನೆಗೆ ಪೂಜ್ಯ ಬಸವ ಗುಂಡಯ್ಯ ಸ್ವಾಮೀಜಿಯವರು ಮಹತ್ವದ ಭರವಸೆಯೊಂದನ್ನು ನೀಡಿದರು. ಮೇ ೨೪ರಂದು ನಡೆಯಲಿರುವ ಕಲ್ಯಾಣ ಮಂಟಪದ ಉದ್ಘಾಟನಾ ಸಮಾರಂಭ ಮುಗಿದ ತಕ್ಷಣವೇ ಶ್ರೀಮಠಕ್ಕೆ ನೂತನ ಕಮಿಟಿ ರಚನೆ ಮಾಡಲಾಗುವುದು. ಅಲ್ಲದೆ, ಕುಂಬಾರ ಸಮಾಜದವರನ್ನೇ ಮಠದ ಉತ್ತರಾಧಿಕಾರಿಯನ್ನಾಗಿ ಸ್ವೀಕರಿಸಲಾಗುವುದು ಎಂದು ಸ್ವಾಮೀಜಿ ಸ್ಪಷ್ಟಪಡಿಸಿದರು.
ಸ್ವಾಮೀಜಿಯವರ ಈ ನಿರ್ಧಾರಕ್ಕೆ ಭಿನ್ನಮತ ಹೊಂದಿದ್ದ ಇನ್ನೊಂದು ಗುಂಪು ಸಮ್ಮತಿ ಸೂಚಿಸಿದ್ದರಿಂದ ಸದ್ಯಕ್ಕೆ ವಿವಾದ ಸುಖಾಂತ್ಯಗೊಂಡಂತಾಗಿದೆ. ಆದಾಗ್ಯೂ, ಮೇ 24ರ
ಕಾರ್ಯಕ್ರಮದ ನಂತರದ ಬೆಳವಣಿಗೆಗಳ ಮೇಲೆ ಸಮಾಜದ ಬಾಂಧವರು ಕಣ್ಣಿಟ್ಟಿದ್ದು, ಚಿಕ್ಕ ಸಮುದಾಯ. ರಾಜ್ಯದಲ್ಲಿರುವುದು ಕುಂಬಾರ ಗುರಪೀಠ ಒಂದೇ ಆಗಿದ್ದು ನಮ್ಮನಮ್ಮಲ್ಲಿಯೇ
ಕಚ್ಚಾಟ ಬೇಡ ಎಂಬ ಮುಖಂಡರ ಅಭಿಪ್ರಾಯಕ್ಕೆ ಸಮ್ಮತಿಸಿ ಸಭೆ ಶಾಂತಗೊಂಡಿತು.
ಸಮಾಜದ ಮುಖಂಡರಾದ ನಿವೃತ್ತ ಡಿವಾಯ್ಎಸ್ಪಿ ಸೋಮಲಿಂಗ, ಬಿ.ಜಿ.ನಾಗೂರ, ಬಸವರಾಜ ಕುಂಬಾರ, ಗುರುರಾಜ ಕುಂಬಾರ, ಜಡೆಪ್ಪಾ ಕುಂಬಾರ, ಸದಾನಂದ ಕುಂಬಾರ, ರಮೇಶ
ಕುಂಬಾರ, ಮಲ್ಲಿಕಾರ್ಜುನ ಕುಂಬಾರ, ದರ.ಶಶಿಧರ ಕುಂಬಾರ, ಡಾ.ಎಸ್.ಪಿ.ಕುಂಬಾರ, ಸಿ.ಜಿ.ಕುಂಬಾರ ಸೇರಿದಂತೆ ಅಕೇಕರು ಉಪಸ್ಥಿತರಿದ್ದರು.
ಊಟದ ವಿಚಾರವಾಗಿ ಶ್ರೀಗಳ ಆರೋಪಕ್ಕೆ ಮುಖಂಡರ ತಿರುಗೇಟು
ಮಠದ ಕೆಲಸ ಕಾರ್ಯಗಳು ಹಾಗೂ ಊಟದ ವ್ಯವಸ್ಥೆಯನ್ನು ನಾನೊಬ್ಬನೇ ಮಾಡಿದ್ದೇನೆ, ನೀವ್ಯಾರೂ ಬಂದಿಲ್ಲ ಎಂಬ ಶ್ರೀ ಬಸವ ಗುಂಡಯ್ಯ ಸ್ವಾಮೀಜಿಯವರ ಆರೋಪವನ್ನು ತೇಲಸಂಗ ಗ್ರಾಮದ ಮುಖಂಡರು ವೇದಿಕೆಯ ಮೇಲೆಯೇ ತೀವ್ರವಾಗಿ ತಳ್ಳಿಹಾಕಿದರು. ಮಠದ ಪ್ರತಿ ಹಂತದಲ್ಲೂ ನಾವು ನಿಮಗೆ ಸಹಾಯ ಮಾಡುತ್ತಲೇ ಬಂದಿದ್ದೇವೆ. ಭಕ್ತರು ಪ್ರತಿ ಮನೆಯಿಂದ ಊಟ ತಂದುಕೊಟ್ಟಿದ್ದಾರೆ. ಆದರೆ ಇಂದು ಅದೇ ಊಟದ ವಿಚಾರದಲ್ಲಿ ಉಂಡಮನೆಯ ಜಂತಿ ಎಣಿಸುವ ಹೀಯಾಳಿಸುವ ಕೆಲಸ ಮಾಡಿದ್ದು ನಮಗೆ ತೀವ್ರ ಬೇಸರ ತಂದಿದೆ ಎಂದು ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು. ಮಠದ ಕಮಿಟಿ ರಚನೆ, ಉತ್ತರಾಧಿಕಾರಿ ನೇಮಕ ಹಾಗೂ ಎಲ್ಲ ಜಿಲ್ಲೆಗಳ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ವಿಷಯದಲ್ಲಿ ನೀವು ಮೊಂಡುತನ ಪ್ರದರ್ಶಿಸುತ್ತಿದ್ದೀರಿ. ನಿಮ್ಮ ಇಂತಹ ಏಕಪಕ್ಷೀಯ ನಿರ್ಧಾರಗಳು ಮತ್ತು ಮುಂದೂಡುವ ತಂತ್ರಗಳು ಸಮಾಜವನ್ನು ಕಟ್ಟುವ ಬದಲಾಗಿ ಒಡೆಯುತ್ತವೆ ಎಂದು ಮುಖಂಡರು ಸ್ವಾಮೀಜಿ
ಎದುರೇ ಆಕ್ರೋಶ ಹೊರಹಾಕಿದರು. ಕೊನೆಗೆ, ಮೇ 24ರ ಕಾರ್ಯಕ್ರಮ ಮುಗಿದ ತಕ್ಷಣವೇ ಮತ್ತೆ ಸಭೆ ಸೇರಿ, ಶ್ರೀಗಳು ನೀಡಿದ ಭರವಸೆಯ ಅನುಷ್ಠಾನದ ಬಗ್ಗೆ ಅಂತಿಮ ತೀರ್ಮಾನ
ಕೈಗೊಳ್ಳಲಾಗುವುದು ಎಂದು ಮುಖಂಡರು ತಿಳಿಸಿದರು.
