Saturday, June 6, 2026
Homeಉದ್ಯೋಗಜರ್ಮನಿ ನಿಯೋಗದ ಜತೆ ಸಿಎಂ ಶಿವಕುಮಾರ್, ಸಚಿವ ಎಂ ಬಿ ಪಾಟೀಲ ಸಭೆ, ಹೂಡಿಕೆ ಕುರಿತು...

ಜರ್ಮನಿ ನಿಯೋಗದ ಜತೆ ಸಿಎಂ ಶಿವಕುಮಾರ್, ಸಚಿವ ಎಂ ಬಿ ಪಾಟೀಲ ಸಭೆ, ಹೂಡಿಕೆ ಕುರಿತು ಚರ್ಚೆ

ಬೆಂಗಳೂರು: ಪರಸ್ಪರ ಆರ್ಥಿಕ ಸಹಕಾರ ಬಲವರ್ಧನೆಯ ಉದ್ದೇಶದಿಂದ ಆಗಮಿಸಿರುವ ಜರ್ಮನಿಯ ತುರಿಂಜಿಯಾ ಪ್ರಾಂತ್ಯದ ಮಂತ್ರಿಮಂಡಲದ ಮುಖ್ಯಸ್ಥ (ಮಿನಿಸ್ಟರ್ ಪ್ರೆಸಿಡೆಂಟ್) ಮಾರಿಯೋ ವಾಯ್ಟ್ ನೇತೃತ್ವದ ಉನ್ನತ ಮಟ್ಟದ ನಿಯೋಗದ ಜತೆ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಶುಕ್ರವಾರ ಇಲ್ಲಿನ ಖಾಸಗಿ ಹೋಟೆಲ್ ನಲ್ಲಿ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಬೃಹತ್ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಕೂಡ ಇದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಶಿವಕುಮಾರ್, ಎರಡೂ ಕಡೆಯವರಿಗೂ ಇರುವ ಅತ್ಯುತ್ತಮ ಅವಕಾಶಗಳನ್ನು ಗುರುತಿಸಲು ನಾವು ಪರಸ್ಪರ ನಿಕಟವಾಗಿ ಕೆಲಸ ಮಾಡಲಿದ್ದೇವೆ. ಇದರಲ್ಲಿ ಜಂಟಿ ಸಹಭಾಗಿತ್ವ, ತಂತ್ರಜ್ಞಾನ ವರ್ಗಾವಣೆ, ಕೌಶಲ್ಯ ಮತ್ತು ಪ್ರತಿಭಾ ವಿನಿಮಯ ಮುಂತಾದವು ಸೇರಿವೆ. ಈ ನಿಟ್ಟಿನಲ್ಲಿ ಕರ್ನಾಟಕ ಮತ್ತು ತುರಿಂಜಿಯಾ ಪ್ರಾಂತೀಯ ಸರಕಾರಗಳು ಜತೆಗೂಡಿ ನಾವೀನ್ಯತೆ ಮತ್ತು ಮುಂದಿನ ತಲೆಮಾರಿನ ತಂತ್ರಜ್ಞಾನದ ಧಾರೆಗಳತ್ತ ಗಮನ ಹರಿಸಲಿವೆ ಎಂದರು.

ನಿಯೋಗವನ್ನು ಬರಮಾಡಿಕೊಂಡ ಸಚಿವ ಎಂ ಬಿ ಪಾಟೀಲ ಮಾತನಾಡಿ, ಕರ್ನಾಟಕ ಮತ್ತು ತುರಿಂಜಿಯಾ ನಡುವೆ ಆಪ್ಟಿಕ್ಸ್ ಮತ್ತು ಫೋಟಾನಿಕ್ಸ್, ಸೆಮಿಕಂಡಕ್ಟರ್, ಬಯೋಟೆಕ್, ವಿದ್ಯುಚ್ಚಾಲಿತ ವಾಹನ ತಯಾರಿಕೆ, ಮರುಬಳಕೆ ಇಂಧನ, ಆಧುನಿಕ ತಯಾರಿಕಾ ಕ್ಷೇತ್ರಗಳಲ್ಲಿ ಉಜ್ವಲ ಅವಕಾಶಗಳಿವೆ. ಆದ್ದರಿಂದ ತುರಿಂಜಿಯಾ ಪ್ರಾಂತ್ಯದ ಕಂಪನಿಗಳು ರಾಜ್ಯದಲ್ಲಿ ಈ ವಲಯಗಳಲ್ಲಿ ಹೆಚ್ಚಾಗಿ ಹೂಡಿಕೆ ಮಾಡಬೇಕು. ನಮ್ಮ ಕೈಗಾರಿಕಾ ನೀತಿಯಲ್ಲೂ ಈ ಕ್ಷೇತ್ರಗಳಿಗೆ ಒತ್ತು ಕೊಡಲಾಗಿದೆ ಎಂದಿದ್ದಾರೆ.

ರಾಜ್ಯದ ಎಲ್ಲಾ ಕಡೆಗಳಲ್ಲೂ ಕೈಗಾರಿಕೆಗಳು ನೆಲೆಯೂರಬೇಕು ಎನ್ನುವುದು ಸರಕಾರದ ಒತ್ತಾಸೆಯಾಗಿದೆ. ನಾವು ಈಗ ಸೇವಾವಲಯದಿಂದ ಉತ್ಪಾದನಾ ಆಧರುತವಾಗುತ್ತಿದೆ. ತುರಿಂಜಿಯಾ ಪ್ರಾಂತ್ಯದ ಕಂಪನಿಗಳು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಅವರು ನುಡಿದಿದ್ದಾರೆ.

ಇದಕ್ಕೆ ಸ್ಪಂದಿಸಿದ ಮಾರಿಯೋ ವಾಯ್ಟ್ ಅವರು, ರಾಜ್ಯದಲ್ಲಿರುವ ಆರ್ & ಡಿ ಕಾರ್ಯಪರಿಸರ, ಡಿಜಿಟಲ್ ಪ್ರತಿಭಾ ಸಂಪನ್ಮೂಲ, ಎಂಜಿನಿಯರಿಂಗ್, ವಿಶ್ವ ದರ್ಜೆಯ ನವೋದ್ಯಮ ಕಾರ್ಯ ಪರಿಸರ, ಕ್ವಾಂಟಂ ತಂತ್ರಜ್ಞಾನ, ಏರೋಸ್ಪೇಸ್ ವಲಯಗಳಲ್ಲಿ ಇರುವ ಮೂಲಸೌಕರ್ಯ ಇತ್ಯಾದಿಗಳನ್ನು ಪ್ರಶಂಸಿಸಿದರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರ ಎಲ್.ಕೆ.ಅತೀಕ್, ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್ ಸೆಲ್ವಕುಮಾರ್ ಉಪಸ್ಥಿತರಿದ್ದರು.

ಹೆಚ್ಚಿನ ಸುದ್ದಿ