Monday, March 23, 2026
Homeಉದ್ಯೋಗಚಾಲನಾ ತರಬೇತಿ ಪಡೆದಿದ್ದ 20 ಮಹಿಳೆಯರು ಹಾಗೂ ಮಂಗಳಮುಖಿಯರಿಗೆ ಉಚಿತ ಎಲೆಕ್ಟ್ರಿಕ್‌ ಆಟೋ ವಿತರಿಸಿದ ಸಚಿವ...

ಚಾಲನಾ ತರಬೇತಿ ಪಡೆದಿದ್ದ 20 ಮಹಿಳೆಯರು ಹಾಗೂ ಮಂಗಳಮುಖಿಯರಿಗೆ ಉಚಿತ ಎಲೆಕ್ಟ್ರಿಕ್‌ ಆಟೋ ವಿತರಿಸಿದ ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು: ಮಹಿಳೆಯರು ಮತ್ತು ಮಂಗಳಮುಖಿರಿಗೆ ಸರ್ಕಾರದಿಂದಲೇ ಸಬ್ಸಿಡಿಯುಕ್ತ ಎಲೆಕ್ಟ್ರಿಕ್‌ ಆಟೋ ಪಡೆದುಕೊಳ್ಳಲು ಬೇಕಾದ ಸಹಾಯ ಮಾಡಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಬಿ.ಪ್ಯಾಕ್‌ ಹಾಗೂ ಸಿಜಿಐ ಸಹಯೋಗದಲ್ಲಿ ನಗರದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಸಮಾರಂಭದಲ್ಲಿ “ಆಟೋ ಚಾಲನೆ ತರಬೇತಿ ಪಡೆದಿದ್ದ 20 ಮಹಿಳೆಯರು ಹಾಗೂ ಮಂಗಳಮುಖಿಯರಿಗೆ ಉಚಿತವಾಗಿ ಇ.ವಿ. ಆಟೋ” ವಿತರಿಸಿ ಮಾತನಾಡಿದರು.

ಬಿ.ಪ್ಯಾಕ್‌ ಹಾಗೂ ಸಿಜಿಐ ಸಹಯೋಗದಲ್ಲಿ ಮಹಿಳೆಯರು ಹಾಗೂ ಮಂಗಳಮುಖಿಯರಿಗೆ ಉಚಿತವಾಗಿ ಆಟೋ ಚಾಲನೆ ತರಬೇತಿ ನೀಡುವ ಜೊತೆಗೆ, ಅವರಿಗೆ ಆರ್ಥಿಕವಾಗಿ ಇನ್ನಷ್ಟು ಅನುಕೂಲ ಮಾಡಿಕೊಡಲು ಉಚಿತವಾಗಿಯೇ ಆಟೋ ವಿತರಿಸುತ್ತಿರುವುದು ಶ್ಲಾಘನೀಯ. ಇದರಿಂದ ಸಾಕಷ್ಟು ಮಹಿಳೆಯರು ತಮ್ಮ ಕಾಲಮೇಲೆ ನಿಂತು ಜೀವನ ನಡೆಸುವ ಧೈರ್ಯ ಬೆಳೆಸಿಕೊಳ್ಳುತ್ತಾರೆ. ಸರ್ಕಾರದಿಂದಲೂ ಮಹಿಳೆಯರಿಗೆ ಇ.ವಿ.ಆಟೋ ಖರೀದಿ ವೇಳೆ ಸಬ್ಸಿಡಿ ಒದಗಿಸುವುದು ಹಾಗೂ ಡ್ರೈವಿಂಗ್‌ ಲೈಸನ್ಸ್‌ ಮಾಡಿಸುವ ವೇಳೆ ಅವರಿಗೆ ಮೊದಲ ಆದ್ಯತೆ ನೀಡುವಂತೆಯೂ ಸೂಚನೆ ನೀಡುವೆ ಎಂದರು. ಅಷ್ಟೆ ಅಲ್ಲ, ನನ್ನ ಸಂಸ್ಥೆಯಿಂದಲೇ ೧೦ ಎಲೆಕ್ಟ್ರಿಕ್‌ ಆಟೋಗಳನ್ನು ಈ ಸಮುದಾಯಕ್ಕೆ ಉಚಿತವಾಗಿ ನೀಡುವುದಾಗಿಯೂ ಇದೇವೇಳೆ ಘೋಷಿಸಿದರು.
ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಸಾಕ್ಷರತೆ ಪ್ರಮಾಣ ಹೆಚ್ಚುತ್ತಿದ್ದು, ಎಲ್ಲಾ ಕ್ಷೇತ್ರದಲ್ಲೂ ಉದ್ಯೋಗದಲ್ಲಿದ್ದಾರೆ. ಆಟೋ ಚಾಲನೆ ಕ್ಷೇತ್ರದಲ್ಲಿ ಮಹಿಳೆಯರ ಪ್ರಮಾಣ ಕಡಿಮೆ. ಆದರೆ, ಇತ್ತೀಚಿನ ದಿನಗಳಲ್ಲಿ ಈ ಕ್ಷೇತ್ರದಲ್ಲೂ ಹೆಚ್ಚು ಮಹಿಳೆಯರು ಆಸಕ್ತಿ ತೋರುತ್ತಿರುವುದು ಶ್ಲಾಘನೀಯ. ರಾಜಕೀಯ ಕ್ಷೇತ್ರದಲ್ಲಿಯೇ ಮಹಿಳಾ ಭಾಗವಹಿಸುವಿಕೆ ಕಡಿಮೆ ಎಂದರು.
ಬಿ.ಪ್ಯಾಕ್‌ ಸಿಇಒ ರೇವತಿ ಅಶೋಕ್ ಮಾತನಾಡಿ, ಸಮಾಜದಲ್ಲಿ ಮಹಿಳೆಯರಿಗೆ ಅರ್ಥಪೂರ್ಣ ಅವಕಾಶ ಒದಗಿಸುವ ಸಲುವಾಗಿ ಉಚಿತ ಆಟೋ ಚಾಲನ ತರಬೇತಿ ನೀಡುತ್ತಾ ಬರಲಾಗಿದ್ದು, ಒಂದು ಆಯ್ದ ಮಹಿಳೆಯರು ಹಾಗೂ ಮಂಗಳಮುಖಿಯರಿಗೆ ಎಲೆಕ್ಟ್ರಿಕ್‌ ಆಟೋ ನೀಡಲಾಗಿದೆ. ಈ ರೀತಿಯ ಕಾರ್ಯಕ್ರಮಗಳನ್ನು ಎಲ್ಲಾ ಕಾರ್ಪೋರೇಟ್‌ ವಲಯ ಹಾಗೂ ಸರ್ಕಾರದ ಸಹಭಾಗಿತ್ವದಲ್ಲಿ ನಡೆಯುತ್ತಿರಬೇಕು ಎಂದು ಹೇಳಿದರು. ಈಗಾಗಲೇ ಬಿ.ಪ್ಯಾಕ್‌ ವತಿಯಿಂದ 400ಕ್ಕೂ ಹೆಚ್ಚು ಮಹಿಳೆಯರಿಗೆ ತರಬೇತಿ ನೀಡಿದ್ದು, ಈ ವರ್ಷದೊಳಗೆ ಸುಮಾರು ಸಾವಿರ ಮಹಿಳೆಯರಿಗೆ ತರಬೇತಿ ನೀಡುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
ಸಿಜಿಐನ ಹಿರಿಯ ಉಪಾಧ್ಯಕ್ಷ ಸುಧೀರ್‌ ಶರ್ಮಾ ಮಾತನಾಡಿ, ಬೆಂಗಳೂರಿನ ಸಕ್ರಿಯ ಹಾಗೂ ಆಸಕ್ತಿ ಮಹಿಳೆಯರು ಹಾಗೂ ಮಂಗಳಮುಖಿಯರಿಗೆ ಜೀವನೋಪಾಯ ಕಂಡುಕೊಳ್ಳಲು ಹಾಗೂ ವೃತ್ತಿ ಜೀವನ ಉತ್ತೇಜಿಸಲು ಈ ತರಬೇತಿ ನೀಡುತ್ತಾ ಬಂದಿರುವುದು ಹೆಮ್ಮೆಯ ವಿಷಯ ಎಂದರು.
ಕಾರ್ಯಕ್ರಮದಲ್ಲಿ ಬಯೋಕಾನ್‌ ಮುಖ್ಯಸ್ಥೆ ಮಜುಂದಾರ್‌ ಷಾ, ಸಿಜಿಐನ ಹಿರಿಯ ಉಪಾಧ್ಯಕ್ಷೆ ಜೆನ್ನಿಫರ್ ಮೆಚೇರಿಪಡ್ಡಿ ಮತ್ತಿತರರು ಉಪಸ್ಥಿತರಿದ್ದರು.

ಹೆಚ್ಚಿನ ಸುದ್ದಿ