Wednesday, August 12, 2026
Homeಆರೋಗ್ಯಗಂಡನ ವಿರುದ್ಧ ಸುಳ್ಳು ವರದಕ್ಷಿಣೆ ಕೇಸ್,ದ್ವೇಷ ಮರೆತು ಮಾವನ ಪ್ರಾಣ ಉಳಿಸಿದ ಅಳಿಯ,ಕೋರ್ಟ್ ಅವರಣದಲ್ಲಿ ಒಂದಾದ...

ಗಂಡನ ವಿರುದ್ಧ ಸುಳ್ಳು ವರದಕ್ಷಿಣೆ ಕೇಸ್,ದ್ವೇಷ ಮರೆತು ಮಾವನ ಪ್ರಾಣ ಉಳಿಸಿದ ಅಳಿಯ,ಕೋರ್ಟ್ ಅವರಣದಲ್ಲಿ ಒಂದಾದ ಗಂಡ-ಹೆಂಡತಿ

ನವದೆಹಲಿ: ಸಂಸಾರದ ಜಗಳ, ಕೋರ್ಟ್-ಕಚೇರಿ ಅಲೆದಾಟಗಳ ಮಧ್ಯೆ ಮಾನವೀಯತೆ ಇನ್ನು ಸತ್ತಿಲ್ಲ ಎಂಬುದನ್ನು ಸಾಬೀತುಪಡಿಸುವ ಹೃದಯಸ್ಪರ್ಶಿ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ತನ್ನ ಮತ್ತು ತನ್ನ ಕುಟುಂಬದ ವಿರುದ್ಧವೇ ಸುಳ್ಳು ವರದಕ್ಷಿಣೆ ಪ್ರಕರಣ ದಾಖಲಿಸಿದ್ದ ಪತ್ನಿಯ ಹಠಮಾರಿತನವನ್ನು ಮರೆತು, ಸಾವಿನ ದಡದಲ್ಲಿದ್ದ ಮಾವನ ಪ್ರಾಣ ಉಳಿಸುವ ಮೂಲಕ ಅಳಿಯನೊಬ್ಬ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.

ಶಿಖಾ ಸಿಂಗ್‌ ಮತ್ತು ಸೌರಭ್ ದಂಪತಿ ನಡುವೆ ಭಿನ್ನಾಭಿಪ್ರಾಯ ಮೂಡಿ ವಿವಾದ ಉಂಟಾಗಿತ್ತು. ಈ ವೇಳೆ ಪತ್ನಿ ಶಿಖಾ, ಪತಿ ಸೌರಭ್ ವಿರುದ್ಧ ವರದಕ್ಷಿಣೆ ಕಿರುಕುಳದ ಸುಳ್ಳು ಮೊಕದ್ದಮೆ ಹೂಡಿ, ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಕಳೆದ 5 ವರ್ಷಗಳಿಂದ ಈ ಕಾನೂನು ಹೋರಾಟ ನಿರಂತರವಾಗಿ ನಡೆಯುತ್ತಲೇ ಇತ್ತು.

ಮಗಳ ಪರವಾಗಿ ಕೋರ್ಟ್‌ನಲ್ಲಿ ಕೇಸ್ ನಡೆಸಲು ಆಕೆಯ ತಂದೆ ತನ್ನ ಜೀವಮಾನದ ಸಂಪಾದನೆಯನ್ನೆಲ್ಲ ಮುಗಿಸಿದ್ದರು. ಹಣದ ತೀವ್ರ ಬಿಕ್ಕಟ್ಟು ಮತ್ತು ಮಾನಸಿಕ ಒತ್ತಡದಿಂದಾಗಿ ತಂದೆಗೆ ಹಠಾತ್ ಹೃದಯಾಘಾತ ಸಂಭವಿಸಿದೆ. ಆದರೆ, ಖಾಸಗಿ ಆಸ್ಪತ್ರೆಗೆ ಸೇರಿಸಲು ಹಣವಿಲ್ಲದ ಕಾರಣ ಅನಿವಾರ್ಯವಾಗಿ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು..

ತನ್ನ ವಿರುದ್ಧವೇ ಕೇಸ್ ಹಾಕಿದ್ದ ಮಾವ ಆಸ್ಪತ್ರೆಯಲ್ಲಿ ಹಣವಿಲ್ಲದೆ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ ಎಂಬ ವಿಷಯ ಪತಿ ಸೌರಬ್‌ಗೆ ತಿಳಿಯಿತು. ಹಳೆಯ ದ್ವೇಷ, ಕೋರ್ಟ್ ಕೇಸ್‌ಗಳನ್ನು ಬದಿಗಿಟ್ಟ ಸೌರಭ್, ತಕ್ಷಣವೇ ಸರ್ಕಾರಿ ಆಸ್ಪತ್ರೆಗೆ ಧಾವಿಸಿದ್ದಾರೆ. ಅಲ್ಲಿಂದ ಮಾವನನ್ನು ಅತ್ಯಾಧುನಿಕ ಸೌಲಭ್ಯವಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಲಕ್ಷಾಂತರ ರೂಪಾಯಿ ವೆಚ್ಚದ ಚಿಕಿತ್ಸೆ ಕೊಡಿಸಿ ಅವರ ಪ್ರಾಣ ಉಳಿಸಿದ್ದಾರೆ.

ಈ ಘಟನೆಯನ್ನು ಕಿಕ್ಕಿ ಸಿಂಗ್ ಎಂಬುವವರು ಎಕ್ಸ್ (X) ನಲ್ಲಿ ಹಂಚಿಕೊಂಡಿದ್ದು, ಸೌರಭ್ ಅವರ ದೊಡ್ಡ ಗುಣಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ. ”ಪತ್ನಿ ತಪ್ಪು ಮಾಡಿರಬಹುದು, ಆದರೆ ಸೌರಭ್ ಮಾನವೀಯತೆ ಮೆರೆದಿದ್ದಾರೆ”, “ಇಂದಿನ ಜಗತ್ತಿನಲ್ಲಿ ಇಂತಹ ಒಳ್ಳೆಯ ಮನಸ್ಸಿನ ಮನುಷ್ಯರನ್ನು ನೋಡುವುದು ಅಪರೂಪ” ಎಂದು ಸಾರ್ವಜನಿಕರು ಕಮೆಂಟ್ ಮಾಡುತ್ತಿದ್ದಾರೆ.

ಹೆಚ್ಚಿನ ಸುದ್ದಿ