Saturday, April 4, 2026
Homeಜಿಲ್ಲಾ ಸುದ್ದಿಗಳುಕೋರ್ಟ್ ಆದೇಶ ಪಾಲಿಸದ : ಮೈಸೂರು ಡಿಸಿ ಬಂಧನಕ್ಕೆ ವಾರೆಂಟ್..!

ಕೋರ್ಟ್ ಆದೇಶ ಪಾಲಿಸದ : ಮೈಸೂರು ಡಿಸಿ ಬಂಧನಕ್ಕೆ ವಾರೆಂಟ್..!

ಮೈಸೂರು: ಭೂ ವ್ಯಾಜ್ಯ ಪ್ರಕರಣದಲ್ಲಿ ನ್ಯಾಯಾಲಯದ ಆದೇಶವನ್ನು ಪಾಲಿಸದ ಹಿನ್ನೆಲೆಯಲ್ಲಿ ಮೈಸೂರಿನ ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ ವಿರುದ್ಧ ಬಂಧನ ವಾರಂಟ್ ಜಾರಿಗೊಳಿಸಿರುವ ಘಟನೆ ಬೆಳಕಿಗೆ ಬಂದಿದೆ.

ಮೈಸೂರಿನ ಒಂದನೇ ಅಪರ ಸಿವಿಲ್ ಜಡ್ಜ್ ಹಾಗೂ ಜೆಎಂಎಫ್ ನ್ಯಾಯಾಲಯ ಈ ಆದೇಶ ಹೊರಡಿಸಿದ್ದು, ಪ್ರಕರಣದ ಮುಂದಿನ ವಿಚಾರಣೆಯನ್ನು ಏಪ್ರಿಲ್ 24ಕ್ಕೆ ಮುಂದೂಡಲಾಗಿದೆ.

ಕುಂಬಾರಕೊಪ್ಪಲು ನಿವಾಸಿ ಜಯರಾಮು ಅವರ ಜಮೀನು ಸಂಬಂಧ ನ್ಯಾಯಾಲಯ ನೀಡಿದ್ದ ತೀರ್ಪನ್ನು ಜಿಲ್ಲಾಡಳಿತ ಜಾರಿಗೊಳಿಸದ ಹಿನ್ನೆಲೆಯಲ್ಲಿ ಅವರು ಮತ್ತೆ ನ್ಯಾಯಾಲಯದ ಮೊರೆ ಹೋಗಿದ್ದರು. ವಿಚಾರಣೆಯನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ, ಆದೇಶ ಪಾಲನೆ ಆಗದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಯ ಬಂಧನಕ್ಕೆ ವಾರಂಟ್ ಜಾರಿಗೊಳಿಸಿದೆ.

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ, “ನ್ಯಾಯಾಲಯದಿಂದ ವಾರಂಟ್ ಜಾರಿಯಾಗಿದೆ ಎಂಬ ಮಾಹಿತಿ ಲಭ್ಯವಿಲ್ಲ. ಮಾಧ್ಯಮಗಳ ಮೂಲಕವೇ ನನ್ನ ಗಮನಕ್ಕೆ ಬಂದಿರುವುದು. ಈ ಬಗ್ಗೆ ಪರಿಶೀಲಿಸಿ ನ್ಯಾಯಾಲಯದ ಆದೇಶದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ” ಎಂದರು.

ಪ್ರಕರಣದ ಹಿನ್ನೆಲೆ:
ಹೆಬ್ಬಾಳು ಗ್ರಾಮದ ಸರ್ವೆ ನಂ. 155 ಮತ್ತು 159/1ರಲ್ಲಿ ಇರುವ ಸುಮಾರು ಐದು ಎಕರೆ ಜಮೀನನ್ನು 1980ರಲ್ಲಿ ನಗರ ಭೂ ಕಾಯ್ದೆಯಡಿ ಜಿಲ್ಲಾಡಳಿತ ಸ್ವಾಧೀನಪಡಿಸಿಕೊಂಡಿತ್ತು. ಈ ಕ್ರಮವನ್ನು ಪ್ರಶ್ನಿಸಿ ಮೂಲ ಮಾಲೀಕರಾದ ಸೀತಾರಾಮೇಗೌಡ ಅವರ ಪುತ್ರ ಚೆಲುವೇಗೌಡ ಮತ್ತು ಮೊಮ್ಮಗ ಜಯರಾಮು ನ್ಯಾಯಾಲಯದ ಮೊರೆ ಹೋಗಿದ್ದರು.

ಕೆಳ ನ್ಯಾಯಾಲಯ ಹಾಗೂ ಮೇಲ್ಮನವಿ ನ್ಯಾಯಾಲಯ ಎರಡೂ ಅರ್ಜಿದಾರರ ಪರ ತೀರ್ಪು ನೀಡಿದ್ದರೂ, ಜಮೀನು ಹಸ್ತಾಂತರಕ್ಕೆ ಜಿಲ್ಲಾಡಳಿತ ಕ್ರಮ ಕೈಗೊಂಡಿರಲಿಲ್ಲ. ಇದರಿಂದ ಬೇಸತ್ತ ಭೂ ಮಾಲೀಕರು ಮತ್ತೆ ನ್ಯಾಯಾಲಯದ ಮೊರೆ ಹೋಗಿದ್ದು, ಇದೀಗ ನ್ಯಾಯಾಲಯ ಕಠಿಣ ನಿಲುವು ತಾಳಿದೆ.

ಜಯರಾಮು ಪರ ವಕೀಲ ನಾಗರಾಜು ಮಾಹಿತಿ ನೀಡಿದಂತೆ, ನ್ಯಾಯಾಲಯದ ಆದೇಶ ಪಾಲನೆಗೆ ವಿಫಲವಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಹೆಚ್ಚಿನ ಸುದ್ದಿ