
ಅಥಣಿ:”ರಕ್ತವನ್ನು ಬೆವರಿನ ರೂಪದಲ್ಲಿ ಸುರಿಸಿ ಸಮಾಜ ಕಟ್ಟುವ ಕಾರ್ಮಿಕ ವರ್ಗದ ಬದುಕು ಹಸನಾಗಬೇಕು. ಕಾರ್ಮಿಕರ ಮಕ್ಕಳು ಕೇವಲ ಕಾರ್ಮಿಕರಾಗಿ ಉಳಿಯದೆ, ಉನ್ನತ ಶಿಕ್ಷಣ ಪಡೆದು ಸಮಾಜದ ಮುಖ್ಯವಾಹಿನಿಗೆ ಬರಬೇಕು,” ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಲಕ್ಷ್ಮಣ ಸವದಿ ಆಶಯ ವ್ಯಕ್ತಪಡಿಸಿದರು.
ಅವರು ಅಥಣಿ ತಾಲೂಕು ಕಟ್ಟಡ ನಿರ್ಮಾಣ ಅಸಂಘಟಿತ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಪಟ್ಟಣದ ಶಿವಯೋಗಿ ವೃತ್ತದಲ್ಲಿ ಆಯೋಜಿಸಲಾಗಿದ್ದ ವಿಶ್ವ ಕಾರ್ಮಿಕ ದಿನಾಚರಣೆ ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಕಾರ್ಮಿಕರ ಮಕ್ಕಳ ಶಿಕ್ಷಣದ ಕುರಿತು ಮಾತನಾಡಿದ ಶಾಸಕರು, “ಬಸವಣ್ಣನವರ ‘ಕಾಯಕವೇ ಕೈಲಾಸ’ ತತ್ವಕ್ಕೆ ಕಾರ್ಮಿಕರು ಅನ್ವರ್ಥವಾಗಿದ್ದಾರೆ. ಅವರ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಅಥಣಿಯಲ್ಲಿ 8 ಎಕರೆ ಜಾಗದಲ್ಲಿ 36 ಕೋಟಿ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ವಸತಿ ಶಾಲೆಯನ್ನು ನಿರ್ಮಿಸಲಾಗುತ್ತಿದೆ. ಈ ವಸತಿ ಶಾಲೆಯಲ್ಲಿ ಪಿಯುಸಿ ವರೆಗೆ ಮಾತ್ರವಲ್ಲದೆ ಸಂಪೂರ್ಣ ಉನ್ನತ ಶಿಕ್ಷಣ ಸಿಗಬೇಕು ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಾಗುವದು ಎಂದರು. ಅಂಬೇಡ್ಕರ್ ಅವರು ಹೇಳಿದಂತೆ ಶಿಕ್ಷಣ ಎಂಬುದು ಹುಲಿ ಹಾಲಿದ್ದಂತೆ, ಅದನ್ನು ಕುಡಿದವರು ಘರ್ಜಿಸಲೇಬೇಕು,” ಎಂದರು.
ಅಸಂಘಟಿತ ಕಾರ್ಮಿಕರ ಸಂಘದ ಕಟ್ಟಡಕ್ಕಾಗಿ ಜಾಗ ನೀಡಲು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜಾಗ ಮಂಜೂರಾದ ತಕ್ಷಣ ಶಾಸಕರ ಅನುದಾನದಡಿ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು ಎಂದು ಅವರು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಕಾರ್ಮಿಕರ ಪ್ರತಿಭಾವಂತ ಮಕ್ಕಳಿಗೆ ಸತ್ಕರಿಸಿ ಗೌರವಿಸಲಾಯಿತು. ಉದ್ಯಮಿ ರಾಜು ಅಲಬಾಳ ಅವರು ತಾಲೂಕು ಮಟ್ಟದಲ್ಲಿ ಕಾರ್ಮಿಕರ ಮಕ್ಕಳು ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ತಮ್ಮ ವೈಯಕ್ತಿಕ ವತಿಯಿಂದ ಸೈಕಲ್ಗಳನ್ನು ವಿತರಿಸಿ ಪ್ರೋತ್ಸಾಹಿಸಿದರು.
ಕಾರ್ಮಿಕ ಇಲಾಖೆಯ ಅಧಿಕಾರಿ ಭುವನೇಶ್ವರಿ ಢಾಲೆ ಇಲಾಖೆಯಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿ, ಕಾರ್ಮಿಕರ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಶಾಸಕರ ಕಾರ್ಯವನ್ನು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಶೆಟ್ಟರ ಮಠದ ಪೂಜ್ಯ ಶ್ರೀ ಮರುಳ ಸಿದ್ದ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪ್ರಮುಖರಾದ ಭುವನೇಶ್ವರಿ ಯಂಕಚ್ಚಿ, ರಾಜು ಅಲಬಾಳ, ಸುರೇಶ ಮೋಪಗಾರ್, ಸುರೇಶ್ ನಿಕ್ಕಂ, ಕೇದಾರಿ ಹಳದಮಳ ಹಾಗೂ ಕಾರ್ಮಿಕ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
