ಲಿಂಗಸೂಗೂರು, ಮೇ 31: ಕರ್ನಾಟಕ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷರಾಗಿ ಹಿರಿಯ ಕಾಂಗ್ರೆಸ್ ನಾಯಕ ಅವರನ್ನು ನೇಮಿಸಬೇಕು ಹಾಗೂ ರಾಯಚೂರು ಜಿಲ್ಲೆಗೆ ಸಚಿವ ಸಂಪುಟದಲ್ಲಿ ಸೂಕ್ತ ಪ್ರಾತಿನಿಧ್ಯ ಕಲ್ಪಿಸಬೇಕು ಎಂದು ಅಹಿಂದ ವರ್ಗದ ಸಂಘಟನೆ ತಾಲೂಕು ಅಧ್ಯಕ್ಷ ಪರಮೇಶ ಕನ್ನಾಪೂರಹಟ್ಟಿ ಒತ್ತಾಯಿಸಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಸಂಘಟನೆ ಬಲವರ್ಧನೆ ಹಾಗೂ ಹಿಂದುಳಿದ ವರ್ಗಗಳ ಧ್ವನಿಯಾಗಿ ಸತೀಶ್ ಜಾರಕಿಹೊಳಿ ಅವರು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡುವುದರಿಂದ ಪಕ್ಷ ಮತ್ತಷ್ಟು ಬಲಗೊಳ್ಳಲಿದೆ ಎಂದು ಅಭಿಪ್ರಾಯಪಟ್ಟರು.
ಅದೇ ರೀತಿ, ರಾಯಚೂರು ಜಿಲ್ಲೆಗೆ ಸಚಿವ ಸ್ಥಾನ ನೀಡುವ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ, ರಾಜ್ಯದ ಪ್ರತಿಷ್ಠಿತ ಹಟ್ಟಿ ಚಿನ್ನದ ಗಣಿ ಸಂಸ್ಥೆಯ ಅಧ್ಯಕ್ಷರನ್ನಾಗಿ ಡಿ.ಎಸ್. ಹುಲಗೇರಿ ಅವರನ್ನು ನೇಮಕ ಮಾಡಬೇಕು ಎಂದು ಒತ್ತಾಯಿಸಿದರು. ಡಿ.ಎಸ್. ಹುಲಗೇರಿ ಅವರು ಸಾಮಾಜಿಕ, ರಾಜಕೀಯ ಹಾಗೂ ಸಾರ್ವಜನಿಕ ಕ್ಷೇತ್ರಗಳಲ್ಲಿ ಸುದೀರ್ಘ ಅನುಭವ ಹೊಂದಿದ್ದು, ಸಂಸ್ಥೆಯ ಅಭಿವೃದ್ಧಿ ಮತ್ತು ಕಾರ್ಮಿಕರ ಹಿತಾಸಕ್ತಿಗೆ ಸಮರ್ಥ ನಾಯಕತ್ವ ನೀಡಬಲ್ಲರು ಎಂದು ಹೇಳಿದರು.
ಸ್ಥಳೀಯ ಜನರ ಆಶಯಕ್ಕೆ ಸ್ಪಂದಿಸಿ ರಾಜ್ಯ ಸರ್ಕಾರ ಈ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗದ್ದೆನಗೌಡ ಪಾಟೀಲ್, ಮೋನು ಲಾಲಾ ಅಹ್ಮದ್ ಸಾಬ್, ಅಮರೇಶ ಮಡಿವಾಳ, ಮೌನೇಶ ಪೂಜಾರಿ, ಪ್ರೇಮಗೌಡ ಹಾಲಬಾವಿ, ರಾಘವೇಂದ್ರ ತುಪ್ಪದ್ ಹಾಗೂ ಗಂಗಾಧರ ನೀರಲಕೇರಿ ಉಪಸ್ಥಿತರಿದ್ದರು.
