ರಾಜ್ಯದಲ್ಲಿ ಆರು ವಿದಾನ ಪರಿಷತ್ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ!
ಪದವೀಧರರು ಹಾಗೂ ಶಿಕ್ಷಕರ ಕ್ಷೇತ್ರಗಳಿಗೆ ಚುನಾವಣೆ ನೆಡೆಯುತ್ತಿದ್ದು ಇದು ನಿಜವಾಗಿಯೂ ಪದವೀಧರರು ಹಾಗೂ ಶಿಕ್ಷಕರ ಚುನಾವಣೆಯೋ ಅಥವಾ ಷೇರುದಾರರ ಚುನಾವಣೆಯೋ ಎಂಬುದನ್ನು ಅಭ್ಯರ್ಥಿಗಳು, ಪಕ್ಷಗಳು ಹಾಗೂ ಚುನಾವಣಾ ಆಯೋಗವೇ ಉತ್ತರಿಸಬೇಕಿದೆ!
ಆದರೆ ಪದವೀಧರರು ಹಾಗೂ ಶಿಕ್ಷಕರು ಅಪ್ಪ ಹಾಕಿದ ಆಲದ ಮರಕ್ಕೆ ಇಂದಿಗೂ ಕೊರಳೊಡ್ಡುತ್ತಿರುವುದು ದುರ್ದೈವ!
ಒಂದು ಕಾಲದಲ್ಲಿ ಕರ್ನಾಟಕದ ವಿದಾನ ಪರಿಷತ್ ಎಂದರೆ ಇಡೀ ದೇಶಕ್ಕೆ ಮಾದರಿಯಾಗಿತ್ತು.
ಚಿಂತಕರ ಛಾವಡಿಯಾಗಿತ್ತು!
ಆದರೆ ಇಂದು ರಾಜಕೀಯ ನಿರಾಶ್ರಿತರ ಶಿಬಿರದಂತಾಗಿದೆ!
ಈ ವಿದಾನ ಪರಿಷತ್ ಚುನಾವಣೆ ಯಂತಹ ಹಾಸ್ಯಾಸ್ಪದ ಹಾಗೂ ಅವೈಜ್ಞಾನಿಕ ಚುನಾವಣೆಗಳು ಮತ್ತೊಂದಿಲ್ಲ!
ಈ ವಿದಾನ ಪರಿಷತ್ ಸಂವಿಧಾನದ ಅನುಚ್ಛೇದ 171 ರ ಅಡಿಯಲ್ಲಿ 171(3) ಯಲ್ಲಿ ತಿಳಿಸಲಾದಂತೆ ಸ್ಥಳೀಯ ಸಂಸ್ಥೆಯಿಂದ ಆಯ್ಕೆಯಾದ ಸದಸ್ಯರು 1/3 ರಷ್ಟು ಸದಸ್ಯರನ್ನು, 1/12 ರಷ್ಟು ಪದವೀಧರರು ತಮ್ಮ ಕ್ಷೇತ್ರಕ್ಕೆ, ಶಿಕ್ಷಕರ ಕ್ಷೇತ್ರದಿಂದ 1/12 ರಷ್ಟು, ವಿದಾನ ಸಭೆ ಸದಸ್ಯರು 1/3, ರಷ್ಟು ಸದಸ್ಯರನ್ನು ಹಾಗೂ ಉಳಿದ 14 ಜನ ಸದಸ್ಯರನ್ನು ಸಮಾಜ ಸೇವೆ, ಕಲೆ, ಸಾಹಿತ್ಯ, ಸಹಕಾರ ಕ್ಷೇತ್ರದಲ್ಲಿನ ತಜ್ಞರನ್ನು ವಿದಾನ ಸಭೆಯ 33% ಸದಸ್ಯರ ಶಿಫಾರಸ್ಸಿನೊಂದಿಗೆ ರಾಜ್ಯಪಾಲರು ನಾಮ ನಿರ್ದೇಶನ ಮಾಡುತ್ತಾರೆ!
2020 ನೇ ಇಸವಿ 104 ನೇ ತಿದ್ದುಪಡಿಯಿಂದಾಗಿ ಆಂಗ್ಲೋ ಇಂಡಿಯನ್ ನೇಮಕ ಮಾಡುವುದನ್ನು ರದ್ದು ಪಡಿಸಲಾಗಿದೆ!!
ಸ್ವಾತಂತ್ರ್ಯ ಬಂದು ಶತಮಾನದ ಹೊಸ್ತಿಲಲ್ಲಿದ್ದರೂ ಸಹ ಪದವೀಧರರು ಹಾಗೂ ಶಿಕ್ಷಕರು ತಮ್ಮ ಸ್ವಾಭಿಮಾನ ಮತ್ತು ಸಂಘಟನೆಯ ಕೊರತೆಯಿಂದ ತಮ್ಮ ಸಂವಿಧಾನ ಬದ್ಧ ಹಕ್ಕುಗಳಿಂದಲೇ ವಂಚಿತರಾಗಿದ್ದಾರೆ.
ಇನ್ನೂ ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿನ ಅತ್ಯಂತ ದೊಡ್ಡ ಕ್ಷೇತ್ರಗಳಾದ ಕೃಷಿ, ವಿಜ್ಞಾನ ಮತ್ತು ತಂತ್ರಜ್ಞಾನ, ವೈಧ್ಯಕೀಯ, ಕ್ರೀಡೆ, ಪರಿಸರ, ಪತ್ರಿಕೋದ್ಯಮ, ವಕೀಲರು ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ತಮ್ಮ ಹಕ್ಕುಗಳಿಂದಲೇ ವಂಚಿತರಾಗಿದ್ದಾರೆ!
ಸಂವಿಧಾನದ ಅನುಚ್ಛೇದ 171(3)(b) ಪ್ರಕಾರ
ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದು ಕನಿಷ್ಟ ಮೂರು ವರ್ಷಗಳ ನಂತರ ಪದವೀಧರರು ಪದವೀಧರರ ಕ್ಷೇತ್ರಕ್ಕೆ ಮತ ಚಲಾಯಿಸಲು ಅರ್ಹರಾಗಿರುತ್ತಾರೆ.
ಅಂದರೆ ಸ್ನಾತಕೋತ್ತರ ಪದವಿ ಪಡೆದು ಒಂದು ವರ್ಷದ ನಂತರ ಪದವೀಧರರ ಕ್ಷೇತ್ರಕ್ಕೆ ಮತಚಲಾಯಿಸುವ ಹಕ್ಕನ್ನು ಹೊಂದಿರುತ್ತಾರೆ!
ಇಲ್ಲಿ ಯೋಚಿಸಬೇಕಾದ್ದು ಇದನ್ನೇ!
21 ವರ್ಷ ವಯಸ್ಸಿನ ಅತ್ಯಂತ ಕಿರಿಯ ಜಿಲ್ಲಾಧಿಕಾರಿಗಳು, 23 ವಯಸ್ಸಿನ ಕಿರಿಯ ನ್ಯಾಯಾಧೀಶರು, ನ್ಯಾಯಾಂಗ ಹಾಗೂ ಕಾರ್ಯಾಂಗದಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿರುವವರು
ನಮ್ಮ ನಡುವೆಯೇ ಇದ್ದಾರೆ!
ಸ್ವಲ್ಪ ಗಮನಿಸಿ:
21 ವರ್ಷಕ್ಕೆ ಪದವಿ ಮುಗಿಯುತ್ತದೆ.
ಐದು ವರ್ಷಗಳ ಕಾನೂನು ಪದವಿ ಪಡೆದರೆ ಅವರ ವಯೋಮಿತಿ 23 ಆಗುತ್ತದೆ!
ಇಲ್ಲಿ ಅತ್ಯಂತ ಕಿರಿಯ ವಯಸ್ಸಿನಲ್ಲೇ ಐ.ಎ.ಎಸ್ ಪಾಸಾದವರು, ನ್ಯಾಯಾಧೀಶರಾಗಿ ಆಯ್ಕೆ ಆದವರು ಇದ್ದಾರೆ! ಕಾರ್ಯಾಂಗದಲ್ಲಿ ಅಧಿಕಾರ ಸ್ವೀಕರಿಸಿ ಒಂದು ತಾಲ್ಲೂಕು ಮತ್ತು ಜಿಲ್ಲೆಯ ಚುನಾವಣಾ ಪ್ರಕ್ರಿಯೆಯನ್ನೇ ನಿಯಂತ್ರಿಸಬಹುದು.
ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿ ಅಧಿಕಾರ ಸ್ವೀಕರಿಸಿ ಚುನಾವಣಾ ಮೊಕದ್ದಮೆಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಬಹುದು!
ಆದರೂ ಇವರಿಗೆ ಪದವೀಧರರ ಕ್ಷೇತ್ರಕ್ಕೆ ಮತ ಚಲಾಯಿಸಲು ಹಕ್ಕೇ ಇರುವುದಿಲ್ಲ! ಹೀಗಿರುವಾಗ ಇವರ ಅಧಿಕಾರಗಳನ್ನು ಪ್ರಶ್ನಿಸಬೇಕಾಗುತ್ತದೆ!
ಇಂದು ಎಷ್ಟೋ ಲಕ್ಷ ಸರಕಾರಿ ಹುದ್ದೆಗಳು ಖಾಲಿ ಉಳಿದಿವೆ, ಇತ್ತ ವಯೋಮಿತಿ ಮೀರುತ್ತಿರುವ ಪದವೀಧರರಿದ್ದಾರೆ,
ಕೆ.ಪಿ.ಎಸ್.ಸಿ ಹಗರಣ,
ವಿಶ್ವವಿದ್ಯಾಲಯ ಗಳ ಸಮಸ್ಯೆಗಳು ಹೀಗೆ ಸಾಲು ಸಾಲು ಸಮಸ್ಯೆಗಳಿದ್ದರೂ ಸಹ ಪದವೀಧರರ ಕ್ಷೇತ್ರದಿಂದ ಆಯ್ಕೆಯಾದ ಪ್ರತಿನಿಧಿಗಳು ಧ್ವನಿ ಎತ್ತುವುದಿಲ್ಲ ಏಕೆ?
ಏಕೆಂದರೆ ಯಾವುದೇ ಪದವೀಧರರು ಪದವಿ ಮುಗಿಸಿ ಬಹಳ ಅಂದರೆ ಮೂರು ವರ್ಷಗಳ ಕಾಲ ಸರಕಾರಿ ಹುದ್ದೆ, ಸ್ಪರ್ಧಾತ್ಮಕ ಪರೀಕ್ಷಾ ತಯಾರಿ ಹೀಗೆ ಯೋಚಿಸಬಹುದು, ನಂತರ ಯಾವುದೋ ಒಂದು ಖಾಸಗಿ ಕ್ಷೇತ್ರದತ್ತ ಮುಖ ಮಾಡುತ್ತಾರೆ!
ನಂತರ ಪದವಿ ಅಥವಾ ಪದವೀಧರರ ಕ್ಷೇತ್ರದ ಬಗ್ಗೆ ಯೋಚಿಸುವುದೇ ಇಲ್ಲ! ಪದವಿ ಪಡೆದು ಮೂರು ವರ್ಷಗಳಲ್ಲಿ ಪದವೀಧರರ ಬೆನ್ನಿಗೆ ನಿಲ್ಲಬೇಕಾದ ಪದವೀಧರರ ಕ್ಷೇತ್ರದ ಜನಪ್ರತಿನಿಧಿಗಳು ಇವರ ಬಗ್ಗೆ ತಲೆಯನ್ನೇ ಕೆಡಿಸಿಕೊಳ್ಳುವುದಿಲ್ಲ!
ಏಕೆಂದರೆ ಇವರುಗಳು ಯಾರೂ ಸಹ ಪದವೀಧರರ ಕ್ಷೇತ್ರಕ್ಕೆ ಮತದಾರರಲ್ಲ! ಹೀಗಿರುವಾಗ ಯಾವ ಜನಪ್ರತಿನಿಧಿ ತಾನೇ ಇವರ ಬಗ್ಗೆ ಯೋಚಿಸುತ್ತಾನೆ??
ಇನ್ನೂ ಸಂವಿಧಾನದ ಅನುಚ್ಛೇದ 171(3)(c) ಪ್ರಕಾರ ಯಾವುದೇ ಹೈಯರ್ ಸೆಕೆಂಡರಿ ಸ್ಕೂಲ್ ಅಥವಾ ತತ್ಸಮಾನ ಪಾಠಶಾಲೆಯಲ್ಲಿ ಪಾಠ ಮಾಡುತ್ತಿರುವ ಕನಿಷ್ಟ ಮೂರು ವರ್ಷಗಳ ಅನುಭವ ಹೊಂದಿರುವ ಶಿಕ್ಷಕರು ಶಿಕ್ಷಕರ ಕ್ಷೇತ್ರಕ್ಕೆ ಮತ ಚಲಾಯಿಸಲು ಹಕ್ಕನ್ನು ಹೊಂದಿರುತ್ತಾರೆ!
ಅಂದರೆ ನೇಮಕಾತಿಯೇ ಆಗದಿದ್ದರೆ ನೇಮಕಾತಿ ಆಗುವುದಾದರೂ ಹೇಗೆ? ನೇಮಕಾತಿ ಆಗದೇ ಅನುಭವವನ್ನು ನಿರೀಕ್ಷಿಸುವುದಾದರೂ ಹೇಗೆ?
ಲಕ್ಷಾಂತರ ಜನ ಬಿ.ಇಡಿ ತರಬೇತಿ ಪಡೆದವರು ಕಾಲಕಾಲಕ್ಕೆ ಹುದ್ದೆ ಭರ್ತಿಗೆ ಸರಕಾರ ಕ್ರಮಕೈಗೊಳ್ಳದೇ ವಯೋಮಿತಿ ಮೀರುತ್ತಿರುವ ಶಿಕ್ಷಕರಿದ್ದಾರೆ!
ಇವರು ಬಿ.ಇಡಿ ತರಬೇತಿ ಪಡೆದಿದ್ದರೂ ಕೂಡ ಮತದಾನದಿಂದ ವಂಚಿತರಾಗುತ್ತಾರೆ!
ಪ್ರಾಥಮಿಕ ಶಾಲೆ ಶಿಕ್ಷಕರಿಗೆ ಮತದಾನದ ಹಕ್ಕೇ ಇರುವುದಿಲ್ಲ!
ಇದರಿಂದಾಗಿ ಶಿಕ್ಷಕರ ಕ್ಷೇತ್ರದ ಬಹುತೇಕ ಜನ ಪ್ರತಿನಿಧಿಗಳು ಖಾಸಗಿ ಶಾಲೆಗಳ ಶಿಕ್ಷಕರನ್ನು ಓಟ್ ಬ್ಯಾಂಕ್ ಮಾಡಿಕೊಂಡು ನಿರಂತರವಾಗಿ ಆಯ್ಕೆಯಾಗುತ್ತಾ ಬರುತ್ತಿದ್ದಾರೆ!
ವರ್ಗಾವಣೆಯಾಗುವ ಕಾರಣ ಸರಕಾರಿ ಶಿಕ್ಷಕರ ಬಗ್ಗೆ ಅಸಡ್ಡೆ ತೋರುತ್ತಿದ್ದಾರೆ!
ವಯೋಮಿತಿ ಮೀರುತ್ತಿರುವ ಶಿಕ್ಷಕರು, ಅತಿಥಿ ಶಿಕ್ಷಕರು, ಅತಿಥಿ ಉಪನ್ಯಾಸಕರು, ಇವರ ಬಗ್ಗೆ ಧ್ವನಿ ಎತ್ತಿದ ಬಗ್ಗೆ ಜನಪ್ರತಿನಿಧಿಗಳೇ ಹೇಳಬೇಕು!
ಇನ್ನೂ ಟಿ.ಇ.ಟಿ ಎಂಬ ಅವೈಜ್ಞಾನಿಕ ಪದ್ಧತಿಯ ಹಿಂದೆ ದೊಡ್ಡ ಹುನ್ನಾರವೇ ಇದೆ!
ಮತದಾರರ ಸಂಖ್ಯೆ ಹೆಚ್ಚಾದಂತೆ ಮತದಾರರ ಮೇಲೆ ಜನಪ್ರತಿನಿಧಿಗಳ ಹಿಡಿತ ಕಡಿಮೆಯಾಗುವುದರಿಂದ ಜನಪ್ರತಿನಿಧಿಗಳು ಈ ಬಗ್ಗೆ ಮಾತಾಡುವುದಿಲ್ಲ!
ಅನುಚ್ಛೇದ 171(3)(a) ಪ್ರಕಾರ ಸ್ಥಳೀಯ ಜನಪ್ರತಿನಿಧಿಗಳ ಕ್ಷೇತ್ರದಿಂದ 25 ಜನ ಪ್ರತಿನಿಧಿಗಳು ಆಯ್ಕೆಯಾಗುತ್ತಾರೆ!
ಇಲ್ಲಿ ಜನಪ್ರತಿನಿಧಿಗಳ ಕನಿಷ್ಟ ವಿದ್ಯಾರ್ಹತೆ ಏನಿದೆ??
21 ವರ್ಷ ವಯಸ್ಸಿನ ಯಾವುದೇ ವ್ಯಕ್ತಿಯು ಸ್ಥಳೀಯ ಸಂಸ್ಥೆಗೆ ಸ್ಪರ್ಧಿಸಬಹುದು!
ಸ್ಥಳೀಯ ಸಂಸ್ಥೆಯ ಸದಸ್ಯರಿಗೆ ಕನಿಷ್ಟ ವಿದ್ಯಾರ್ಹತೆಯನ್ನು ನಿಗದಿ ಮಾಡಿರುವುದಿಲ್ಲ!
ಇವರು 25 ಜನ ಪ್ರತಿನಿಧಿಗಳನ್ನು ವಿದಾನ ಪರಿಷತ್ ಗೆ ಆಯ್ಕೆ ಮಾಡುತ್ತಾರೆ!
ಮಾತ್ರವಲ್ಲದೆ ಲೋಕಸಭಾ ಚುನಾವಣೆಗೆ ಮತ ಚಲಾಯಿಸಿ ದೇಶದ ಪ್ರದಾನಿಯನ್ನೇ ಆಯ್ಕೆ ಮಾಡಲಾಗುತ್ತದೆ!
ಆದರೆ ಪದವೀಧರರು ಪದವಿ ಪಡೆದ ವರ್ಷವೇ ಕಾರ್ಯಾಂಗ ನ್ಯಾಯಾಂಗ ದಲ್ಲಿ ಕಾರ್ಯನಿರ್ವಹಿಸಿದರು ಸಹ ಮತದಾನದ ಹಕ್ಕಿನಿಂದ ವಂಚಿತರಾಗಿದ್ದಾರೆ!!
ಪದವೀಧರರ ಕ್ಷೇತ್ರದ ಹಾಗೂ ಸ್ಥಳೀಯ ಮತ್ತು ಜನಪ್ರತಿನಿಧಿಗಳಿಂದ ಆಯ್ಕೆಯಾಗುವ ವಿದಾನ ಪರಿಷತ್ ಸದಸ್ಯರಲ್ಲಿ ಯಾವ ವ್ಯತ್ಯಾಸವಿದೆ??
ಅನುಚ್ಛೇದ 171(3)(d) ಪ್ರಕಾರ ವಿದಾನ ಸಭೆ ಸದಸ್ಯರು 25 ಜನ ಪ್ರತಿನಿಧಿಗಳನ್ನು ಆಯ್ಕೆ ಮಾಡುತ್ತಾರೆ! ಅಂದರೆ ಪ್ರತಿ ಒಂಭತ್ತು ಜನರಿಗೆ ಒಬ್ಬ ವಿದಾನ ಪರಿಷತ್ ಸದಸ್ಯರು!
ಆದರೆ ಲಕ್ಷಾಂತರ ಜನರಿರುವ ಪದವೀಧರರು, ಶಿಕ್ಷಕರು, ಕೃಷಿಕರು, ಕಾರ್ಮಿಕರು,ಇವರ ಜನಪ್ರತಿನಿಧಿಗಳ ಸಂಖ್ಯೆ ಎಷ್ಟಿದೆ??
ಇಲ್ಲಿ ನಮ್ಮ ಜನಪ್ರತಿನಿಧಿಗಳು ಸ್ಥಳೀಯ ಹಾಗೂ ಲೋಕಸಭೆಯ ವರೆಗೂ ಇದ್ದಾರೆ! ಮತ್ತೆ ಇವರು ತಮ್ಮ ಪ್ರತಿನಿಧಿಗಳನ್ನು ವಿದಾನ ಪರಿಷತ್ ಗೆ ಆಯ್ಕೆ ಮಾಡುತ್ತಾರೆ. ಜನಪ್ರತಿನಿಧಿಗಳಿಗೆ ಮತ್ತೆ ಜನಪ್ರತಿನಿಧಿಗಳು ಬೇಕೇ?
ಇವರಿಗೇಕೆ ಜನಪ್ರತಿನಿಧಿಗಳು??
ಇವರ ಅವಶ್ಯಕತೆ ಇದೆಯೇ??
ನಮ್ಮದು ಪ್ರಜಾಪ್ರಭುತ್ವ ನಮ್ಮ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಹಕ್ಕು ನಮಗಿದೆ!
ಈ ನಿಟ್ಟಿನಲ್ಲಿ ಪದವಿ ಪಡೆದ ವರ್ಷವೇ ಪದವೀಧರರ ಕ್ಷೇತ್ರಕ್ಕೆ ಮತದಾನದ ಹಕ್ಕು,
ಪದವೀಧರರ ಕ್ಷೇತ್ರದಿಂದ ಆಯ್ಕೆಯಾಗುವ ಜನಪ್ರತಿನಿಧಿಗಳ ಸಂಖ್ಯೆ ಹೆಚ್ಚಳ
ಪ್ರಾಥಮಿಕ ಶಾಲಾ ಶಿಕ್ಷಕರು ಶಿಕ್ಷಣ ತರಬೇತಿ ಪಡೆದ ಪ್ರಶಿಕ್ಷಣಾರ್ಥಿಗಳಿಗೂ ಶಿಕ್ಷಕರ ಕ್ಷೇತ್ರಕ್ಕೆ ಮತದಾನದ ಹಕ್ಕು.
ಶಿಕ್ಷಕರ ಕ್ಷೇತ್ರದ ಜನಪ್ರತಿನಿಧಿಗಳ ಸಂಖ್ಯೆ ಹೆಚ್ಚಳ ಸೇರಿದಂತೆ
ಕೃಷಿ, ನ್ಯಾಯವಾದಿಗಳು, ಕ್ರೀಡೆ, ಪರಿಸರ, ವಿಜ್ಞಾನ ಮತ್ತು ವೈದ್ಯಕೀಯ, ಮಾಧ್ಯಮ,
ಹೀಗೆ ಇತರ ದೊಡ್ದ ಕ್ಷೇತ್ರಕ್ಕೂ ಪ್ರಾತಿನಿಧ್ಯ.
ವಿದಾನ ಸಭೆ ಚುನಾವಣೆಯಲ್ಲಿ ಸೋತವರನ್ನು ವಿದಾನ ಪರಿಷತ್ ಕನಿಷ್ಟ ಆರು ವರ್ಷಗಳ ವರೆಗೆ ನಾಮ ನಿರ್ದೇಶನ ಮಾಡುವಂತಿಲ್ಲ!
ಹೀಗೆ ಅನೇಕ ಬದಲಾವಣೆಗಳನ್ನು ಅನುಚ್ಛೇದ 171(3) ಕ್ಕೆ ತಿದ್ದುಪಡಿ ತರಲೇಬೇಕು.
ಇಲ್ಲವೇ ವಿದಾನ ಪರಿಷತ್ ರದ್ದಾಗಲಿ!
ಈ ಬಗ್ಗೆ ಮೊದಲು ಸಾರ್ವತ್ರಿಕ ಚರ್ಚೆಯಾಗಲಿ!
ಭಾಸ್ಕರ ಮುದೇನೂರು
ಅಧ್ಯಕ್ಷರು
ಅನುಚ್ಛೇದ 171(3) ತಿದ್ದುಪಡಿ
ಹೋರಾಟ ಸಮಿತಿ.
