ಮುದ್ದೇಬಿಹಾಳ:
ಕಾರ್ಮಿಕ ಇಲಾಖೆಯಿಂದ ಕಟ್ಟಡ ಕಾರ್ಮಿಕರಿಗೆ ವಿತರಿಸಲಾಗುವ ಸುರಕ್ಷತಾ ಸಲಕರಣೆಗಳ ಕಿಟ್ಗಳನ್ನು ಸುವರ್ಣ ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಸಂಘದ ಸಹಯೋಗದಲ್ಲಿ ತಾಲೂಕಿನ 300ಕ್ಕೂ ಹೆಚ್ಚು ಕಟ್ಟಡ ಕಾರ್ಮಿಕರಿಗೆ ವಿತರಿಸಲಾಯಿತು.
ಪಟ್ಟಣದ ಪುರಸಭೆ ಎದುರಿನ ಬಿದರಕುಂದಿ ಕಾಂಪ್ಲೆಕ್ಸ್ನಲ್ಲಿರುವ ಸುವರ್ಣ ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಸಂಘದ ಅಧಿಕೃತ ಕಾರ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರ್ಮಿಕರಿಗೆ ಕಿಟ್ಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹುಲಗಪ್ಪ ಕಿಲಾರಟ್ಟಿ, ಕಾರ್ಮಿಕ ಇಲಾಖೆಯಿಂದ ಕಟ್ಟಡ ಕಾರ್ಮಿಕರಿಗಾಗಿ ಹಲವಾರು ಸೌಲಭ್ಯಗಳು ಮತ್ತು ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಆದರೆ ಮುದ್ದೇಬಿಹಾಳ ತಾಲೂಕಿನಲ್ಲಿ ಇನ್ನೂ ಅನೇಕ ಕಟ್ಟಡ ಕಾರ್ಮಿಕರು ಇಲಾಖೆಯಲ್ಲಿ ನೋಂದಣಿ ಮಾಡಿಸಿಕೊಂಡಿಲ್ಲ. ಅಂತಹ ಕಾರ್ಮಿಕರು ಕೂಡಲೇ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಮಿಕರು ನೋಂದಣಿ ಮಾಡಿಕೊಂಡಲ್ಲಿ ಕೇವಲ ಅವರಿಗಷ್ಟೇ ಅಲ್ಲದೆ ಕುಟುಂಬದ ಸದಸ್ಯರಿಗೂ ಸರ್ಕಾರದಿಂದ ವಿವಿಧ ಸೌಲಭ್ಯಗಳು ದೊರೆಯಲಿವೆ. ಕಟ್ಟಡ ಕಾರ್ಮಿಕರನ್ನು ಗುರುತಿಸಿ ನೋಂದಣಿ ಮಾಡಿಸುವ ಕಾರ್ಯವನ್ನು ನಮ್ಮ ಸಂಘವು ಜಿಲ್ಲಾದ್ಯಂತ ಕೈಗೊಂಡಿದ್ದು, ಈಗಾಗಲೇ ಸಾಕಷ್ಟು ಕಾರ್ಮಿಕರನ್ನು ನೋಂದಣಿ ಮಾಡಿಸುವಲ್ಲಿ ಯಶಸ್ವಿಯಾಗಿದೆ. ಮುಂದಿನ ದಿನಗಳಲ್ಲಿಯೂ ಕಾರ್ಮಿಕರ ಹಿತದೃಷ್ಟಿಯಿಂದ ಇನ್ನಷ್ಟು ಕಾರ್ಯಗಳನ್ನು ಸಂಘದ ವತಿಯಿಂದ ಕೈಗೊಳ್ಳಲಾಗುವುದು ಎಂದು ಹೇಳಿದರು.
₹700 ಮೌಲ್ಯದ ಸುರಕ್ಷತಾ ಕಿಟ್:
ರಾಜ್ಯ ಕಾರ್ಮಿಕ ಇಲಾಖೆಯಿಂದ ಕಟ್ಟಡ ಕಾರ್ಮಿಕರಿಗಾಗಿ ಸುಮಾರು ₹700 ಮೌಲ್ಯದ ಸುರಕ್ಷತಾ ಸಲಕರಣೆಗಳ ಕಿಟ್ ವಿತರಿಸಲಾಗುತ್ತಿದೆ. ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿರುವ ಕಾರ್ಮಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕಿಟ್ನಲ್ಲಿ ಹೆಲ್ಮೆಟ್, ಬೂಟ್, ಹ್ಯಾಂಡ್ ಗ್ಲೌಸ್, ಮಾಸ್ಕ್, ಚಸ್ಮಾ ಸೇರಿದಂತೆ ವಿವಿಧ ರಕ್ಷಣಾ ಸಾಮಗ್ರಿಗಳನ್ನು ಒದಗಿಸಲಾಗಿದೆ.
ಕೆಲಸದ ಸಂದರ್ಭದಲ್ಲಿ ಸುರಕ್ಷತಾ ಸಲಕರಣೆಗಳನ್ನು ಕಡ್ಡಾಯವಾಗಿ ಬಳಸುವ ಮೂಲಕ ಕಾರ್ಮಿಕರು ಅಪಘಾತಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕು. ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಅರ್ಹ ಎಲ್ಲ ಕಟ್ಟಡ ಕಾರ್ಮಿಕರು ಪಡೆದುಕೊಳ್ಳಬೇಕು ಎಂದು ಸಂಘದ ಪದಾಧಿಕಾರಿಗಳು ತಿಳಿಸಿದರು.
ಕಾರ್ಯಕ್ರಮದಲ್ಲಿ ಸುವರ್ಣ ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಸಂಘದ ಗೌರವಾಧ್ಯಕ್ಷ ಹಣಮಂತ ಮೇಲಿನಮನಿ, ಉಪಾಧ್ಯಕ್ಷ ವಿಠ್ಠಳ ಹರಿದ್ರಾಳ, ಕಾರ್ಯದರ್ಶಿ ಜಟ್ಟೆಪ್ಪ ಲೇಬಗೇರಿ, ಶಿವಾಜಿ ಪವಾರ, ಕಾಶಿಮಸಾಬ ರೋಜಿನದಾರ, ಬಾಲದಂಡಪ್ಪ ಕೋಳೂರ, ಮಹ್ಮದ್ ರಫೀಕ್ ಮೊಕಾಶಿ, ಶೇಖರ ಢವಳಗಿ, ಲಕ್ಷ್ಮಣ ಮುಗಳ್ಳೋಳ್ಳಿ, ಖಾಜಾವಲಿ ಮುಲ್ಲಾ, ಅಡಿವೆಪ್ಪ ಮುದ್ನಾಳ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.
“ಕಾರ್ಮಿಕ ಇಲಾಖೆಯಲ್ಲಿ ಕೇವಲ ಕಟ್ಟಡ ಕಾರ್ಮಿಕರಲ್ಲದೇ ಇನ್ನೂಳಿದ ದಿನನಿತ್ಯ ಕೆಲಸ ಮಾಡುವ ಎಲ್ಲಾ ಕಾರ್ಮಿಕರೂ ಕಡ್ಡಾಯವಾಗಿ ನೊಂಧಣಿ ಮಾಡಿಸಿಕೊಳ್ಳಬೇಕು. ಇದರಿಂದ ಅವರ ಮಕ್ಕಳ ಶಿಕ್ಷಣಕ್ಕಾಗಿ ವಿದ್ಯಾರ್ಥಿ ವೇತನ, ಮದುಗೆ ಸಹಾಯಧನ ಸೇರಿದಂತೆ ವಿಮಾವನ್ನೂ ಇಲಾಖೆಯಿಂದ ನೀಡಲಾಗುತ್ತದೆ.”
ಹುಲಗಪ್ಪ ಕಿಲಾರಟ್ಟಿ, ಅಧ್ಯಕ್ಷರು, ಸುವರ್ಣ ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕ ಸಂಘ, ವಿಜಯಪುರ.
