ನೆಲಮಂಗಲ, ಮಾ.1: ಸಾಮಾಜಿಕ ನ್ಯಾಯ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಲಭಿಸಬೇಕು ಎಂಬುದು ಸಂವಿಧಾನದ ಆಶಯವಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಪ್ರತಿಪಾದಿಸಿದ್ದಾರೆ.
ನೆಲಮಂಗಲದ ಅರಳೆಪೇಟೆಯ ಬಸವೇಶ್ವರ ಸ್ವಾಮಿ ದೇವಾಲಯದಲ್ಲಿ ನಡೆದ ಆದಿ ಜಗದ್ಗುರು ರೇಣುಕಾಚಾರ್ಯ ಜಯಂತ್ಯುತ್ಸವ ಹಾಗೂ ಜಗದ್ಗುರು ಪಂಚಾಚಾರ್ಯರ ಯುಗಮಾನೋತ್ಸವದಲ್ಲಿ ಮಾತನಾಡಿದ ಅವರು, ಆರ್ಥಿಕವಾಗಿ ಹಿಂದುಳಿದ ಸಮಾಜದ ಬಡವರನ್ನೂ ಗುರುತಿಸಿ, ಆರ್ಥಿಕವಾಗಿ ಮೇಲೆತ್ತುವ ಕಾರ್ಯವನ್ನು ಕರ್ನಾಟಕ ವೀರಶೈವ-ಲಿಂಗಾಯತ ಅಭಿವೃದ್ದಿ ನಿಗಮದ ವತಿಯಿಂದ ಸರ್ಕಾರ ಮಾಡುತ್ತಿದೆ ಎಂದರು,
ಸ್ವಯಂ ಉದ್ಯೋಗ ಸಾಲ, ಗಂಗಾಕಲ್ಯಾಣ ನೀರಾವರಿ ಯೋಜನೆ, ಅರಿವು ಶೈಕ್ಷಣಿಕ ಸಾಲ, ವಿದೇಶ ವ್ಯಾಸಂಗ ಇತ್ಯಾದಿ ನೆರವು ನೀಡಲು 224 ಕೋಟಿ ರೂಪಾಯಿಗಳ ಅನುದಾನವನ್ನು ಮುಖ್ಯಮಂತ್ರಿಯವರು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ನೀಡಿದ್ದಾರೆ ಎಂದು ಈಶ್ವರ ಖಂಡ್ರೆ ತಿಳಿಸಿದರು.
ಮಹಾಪುರುಷರು ನೀಡಿದ ಸಂದೇಶ, ಕೊಡುಗೆಯನ್ನು ಸ್ಮರಿಸುವುದೇ ಜಂಯತ್ಯುತ್ಸವಗಳ ಉದ್ದೇಶವಾಗಿದ್ದು, ಮಹಾಮಹಿಮರ ತತ್ವಾದರ್ಶಗಳನ್ನು ಸ್ಮರಿಸಿ, ಅದರಂತೆ ನಡೆದಾಗ ಇಂತಹ ಆಚರಣೆಗಳು ಅರ್ಥಪೂರ್ಣವಾಗುತ್ತವೆ ಎಂದರು.
ನಮ್ಮ ಮಠಮಾನ್ಯಗಳು ರೇಣುಕಾದಿ ಜಗದ್ಗುರುಗಳ ಮತ್ತು ಬಸವಾದಿ ಶರಣರ ಆದರ್ಶವನ್ನು ಮುಂದುವರಿಸಿಕೊಂಡು ಬಂದಿದ್ದು, ಆಶ್ರಯ, ಅರಿವು ಮತ್ತು ಅನ್ನ ಎಂಬ ತ್ರಿವಿಧ ದಾಸೋಹದ ಮೂಲಕ ಸಮಾಜದ ಏಳಿಗೆಗೆ ಕೊಡುಗೆ ನೀಡುತ್ತಿವೆ. ರಾಜ್ಯದ ಮತ್ತು ರಾಷ್ಟ್ರದ ಅಭಿವೃದ್ಧಿಗೆ ನಮ್ಮ ಮಠಮಾನ್ಯಗಳು ನೀಡಿರುವ ಕೊಡುಗೆ ಅಪಾರವಾದ್ದು ಎಂದರು.
ವೀರಶೈವ ಲಿಂಗಾಯತರು ಸದಾ ಒಂದೇ:
ಅತ್ಯಂತ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯನ್ನು ಹೊಂದಿರುವ ನಮ್ಮ ಸಮುದಾಯ ಇಂದು ಕವಲು ದಾರಿಯಲ್ಲಿದೆ, ಹಲವರು ಒಡೆದಾಳುವ ನೀತಿ ಅನುಸರಿಸುತ್ತಿದ್ದಾರೆ. ಆದರೆ ಮಹಾಸಭಾ ವೀರಶೈವರು ಮತ್ತು ಲಿಂಗಾಯತರು ಒಂದೇ ಎಂದು ಕಾಲಕಾಲಕ್ಕೆ ಪ್ರತಿಪಾದಿಸುತ್ತಾ ಬಂದಿದೆ. ಯಾವುದೇ ಶಕ್ತಿ ಎಷ್ಟೇ ಪ್ರಯತ್ನಪಟ್ಟರೂ ವೀರಶೈವ ಮತ್ತು ಲಿಂಗಾಯತರನ್ನು ಬೇರೆ ಮಾಡಲು ಆಗುವುದಿಲ್ಲ ಎಂದು ಹೇಳಿದರು.
ವಿಘಟನೆಯಲ್ಲಿ ಬಲವಿಲ್ಲ. ಸಂಘಟನೆಯಲ್ಲಿ ಶಕ್ತಿ ಇದೆ. ನಾವು ಸಂಘಟಿತರಾದರೆ ಸಮಾಜದ ಎಲ್ಲರ ಉದ್ದಾರಕ್ಕೆ ಶ್ರಮಿಸಲು ಸಾಧ್ಯ. ಇಂದು ನನ್ನ ಮೇಲೆ ವಿಶ್ವಾಸವಿಟ್ಟು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಮಹಾಸಭಾದ ಘನ ಉದ್ದೇಶವನ್ನು ಈಡೇರಿಸಲು, ಒಗ್ಗೂಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.
ಬೆಂಗಳೂರಿನಲ್ಲಿ 1000 ವಿದ್ಯಾರ್ಥಿನಿಯರಿಗಾಗಿ ಒಂದು ವಸತಿ ನಿಲಯ ನಿರ್ಮಿಸಬೇಕು ಎಂಬ ಕನಸು ನಮ್ಮ ತಂದೆ ಹಾಗೂ ಮಾಜಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಭೀಮಣ್ಣ ಖಂಡ್ರೆ ಅವರದಾಗಿತ್ತು. ಮುಂದಿನ ಒಂದೂವರೆ ವರ್ಷದಲ್ಲಿ ಮಹಾಸಭಾದಿಂದ ಈ ಕನಸು ನನಸು ಮಾಡಲಾಗುವುದು ಎಂದರು.
ಇಂದು ಯುವಶಕ್ತಿಯ ದುರ್ಬಳಕೆ ಆಗುತ್ತಿದೆ. ಅಧರ್ಮ, ಅನೀತಿ ತಾಂಡವವಾಡುತ್ತಿದೆ. ಎಲ್ಲರೂ ಕೀರ್ತಿ, ಹಣದ ಹಿಂದೆ ಓಡುತ್ತಿದ್ದಾರೆ. ಇದರಿಂದ ಕೌಟುಂಬಿಕ ವ್ಯವಸ್ಥೆ ಹಾಳಾಗುತ್ತಿದೆ. ಸೋದರರು ಸಂಪತ್ತಿಗಾಗಿ ಹೊಡೆದಾಡುವ ಸ್ಥಿತಿ ಬಂದಿದೆ. ಮಕ್ಕಳೇ ತಂದೆ ತಾಯಿಗಳಿಗೆ ಶತ್ರುಗಳಾಗುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ಮಕ್ಕಳನ್ನು ಸದ್ಗುಣಿಗಳನ್ನಾಗಿ, ಸಚ್ಚಾರಿತ್ರ್ಯವಂತರನ್ನಾಗಿ ಬೆಳೆಸುವ ಜವಾಬ್ದಾರಿ ತಾಯಂದಿರ ಮೇಲಿದೆ. ಇಂತಹ ಪರಿವರ್ತನೆಯ ಶಕ್ತಿ ನಮ್ಮ ವಚನಗಳಲ್ಲಿವೆ ಎಂದು ಹೇಳಿದರು.
ಮುಂದಿನ ಪೀಳಿಗೆಯ ಭವ್ಯ ಭವಿಷ್ಯಕ್ಕಾಗಿ, ಪ್ರಕೃತಿ, ಪರಿಸರ ಸಂರಕ್ಷಿಸುವಂತೆ ಅರಣ್ಯ, ಪರಿಸರ ಸಚಿವರೂ ಆದ ಈಶ್ವರ ಖಂಡ್ರೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಶ್ರೀಮದ್ ಉಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ್ವರ ಶ್ರೀ ಶ್ರೀ 1008 ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದಂಗಳವರು, ಕಾಡಸಿದ್ದೇಶ್ವರ ಮಠದ ಡಾ. ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿದ್ದರು.
