ಬೆಂಗಳೂರು,ಮೇ.13: ಪರಿಶಿಷ್ಟ ಜಾತಿಗಳ ಮೀಸಲಾತಿ ವರ್ಗೀಕರಣ (ಒಳ ಮೀಸಲಾತಿ) ಸಂಬಂಧ ರಾಜ್ಯ ಸಚಿವ ಸಂಪುಟ ಕೈಗೊಂಡ ಐತಿಹಾಸಿಕ ನಿರ್ಧಾರದ ಅನ್ವಯ 400 ಬಿಂದುಗಳ ರೋಸ್ಟರ್ ಪಟ್ಟಿಯನ್ನು ರಾಜ್ಯ ಸರ್ಕಾರ ಅಧಿಕೃತವಾಗಿ ಬಿಡುಗಡೆ ಮಾಡಿರುವುದನ್ನು ಕರ್ನಾಟಕ ರಾಜ್ಯ ಯುವ ಸಮೂಹ ಹರ್ಷದಿಂದ ಸ್ವಾಗತಿಸುತ್ತದೆ. ಸರ್ಕಾರ ತನ್ನ ಆದೇಶವನ್ನು ಕಾಲಮಿತಿಯಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂದು ಸಂಘಟನೆಯ ರಾಜ್ಯಾಧ್ಯಕ್ಷರಾದ ಡಾ. ಎಸ್. ಸಂಗಮೇಶ್ ಒತ್ತಾಯಿಸಿದ್ದಾರೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿಗಳ ಮೀಸಲಾತಿಯನ್ನು ಮೂರು ಪ್ರವರ್ಗಗಳಾಗಿ ವಿಭಜಿಸಿ, ಪ್ರವರ್ಗ ‘ಎ’ಗೆ ಶೇ.5.25, ಪ್ರವರ್ಗ ‘ಬಿ’ಗೆ ಶೇ.5.25 ಹಾಗೂ ಪ್ರವರ್ಗ ‘ಸಿ’ಗೆ ಶೇ.4.5ರಷ್ಟು ಮೀಸಲಾತಿ ನಿಗದಿಪಡಿಸಿರುವುದು ಸಾಮಾಜಿಕ ನ್ಯಾಯದ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಪ್ರವರ್ಗ ‘ಸಿ’ಯಲ್ಲಿ ಸ್ಪೃಶ್ಯ ಸಮುದಾಯಗಳ ಜೊತೆಗೆ ಅಲೆಮಾರಿ ಸಮುದಾಯಗಳಿಗೂ ಸ್ಥಾನ ಕಲ್ಪಿಸಿರುವ ಸರ್ಕಾರ, ಅಲೆಮಾರಿ ಸಮುದಾಯಗಳಿಗೆ ಶೇ.20ರಷ್ಟು ಪ್ರಾತಿನಿಧ್ಯ ನೀಡುವ ಭರವಸೆಯಂತೆ ನಾಲ್ಕು ವಿಶೇಷ ರೋಸ್ಟರ್ ಬಿಂದುಗಳನ್ನು ಗುರುತಿಸಿರುವುದು ಶ್ಲಾಘನೀಯ ಕ್ರಮವಾಗಿದೆ ಎಂದು ತಿಳಿಸಿದ್ದಾರೆ.
ಸರ್ಕಾರ ಬಿಡುಗಡೆ ಮಾಡಿರುವ ‘ಅನುಬಂಧ–1’ರಲ್ಲಿ 400 ಬಿಂದುಗಳ ಸಾಮಾನ್ಯ ರೋಸ್ಟರ್ ಪಟ್ಟಿ ಪ್ರಕಟವಾಗಿದ್ದು, ‘ಅನುಬಂಧ–2’ರಲ್ಲಿ ಎಸ್ಸಿ ಒಳಮೀಸಲು ಸ್ಥಾನಗಳನ್ನು ಪ್ರತ್ಯೇಕವಾಗಿ ಗುರುತಿಸಲಾಗಿದೆ. ಒಟ್ಟು 400 ಬಿಂದುಗಳ ರೋಸ್ಟರ್‌ನಲ್ಲಿ 60 ಹುದ್ದೆಗಳು ಪರಿಶಿಷ್ಟ ಜಾತಿಗಳಿಗೆ ಮೀಸಲಾಗಿದ್ದು, ಅದರೊಳಗೆ ಎ, ಬಿ ಹಾಗೂ ಸಿ ಪ್ರವರ್ಗಗಳಿಗೆ ಅನುಗುಣವಾಗಿ ಸ್ಥಾನಗಳನ್ನು ಹಂಚಿಕೆ ಮಾಡಲಾಗಿದೆ.
ಅಲೆಮಾರಿ ಸಮುದಾಯಗಳಿಗೆ ಮೀಸಲಾದ ರೋಸ್ಟರ್ ಬಿಂದುಗಳನ್ನು ವಿಶೇಷವಾಗಿ ಸ್ಟಾರ್ (*) ಗುರುತಿನ ಮೂಲಕ ಸೂಚಿಸಿರುವುದು ಗಮನಾರ್ಹ. ಅದರನ್ವಯ 15, 127, 241 ಹಾಗೂ 353ನೇ ರೋಸ್ಟರ್ ಬಿಂದುಗಳು ಅಲೆಮಾರಿ ಸಮುದಾಯಗಳಿಗೆ ಮೀಸಲಾಗಿವೆ. ಒಂದು ವೇಳೆ ಈ ಬಿಂದುಗಳಲ್ಲಿ ಅರ್ಹ ಅಲೆಮಾರಿ ಅಭ್ಯರ್ಥಿಗಳು ಲಭ್ಯವಾಗದಿದ್ದರೆ, ಆ ಹುದ್ದೆಗಳು ಪ್ರವರ್ಗ ‘ಸಿ’ಯ ಇತರೆ ಜಾತಿಗಳಿಗೆ ವರ್ಗಾಯಿಸಲಾಗುತ್ತದೆ ಎಂಬ ನಿಯಮದಿಂದ ಅಲೆಮಾರಿ ಸಮುದಾಯದ ಬ್ಯಾಕ್‌ಲಾಗ್ ಸಮಸ್ಯೆ ಉಂಟಾಗುವ ಸಾಧ್ಯತೆ ಕಡಿಮೆಯಾಗಲಿದೆ ಎಂದು ಡಾ. ಸಂಗಮೇಶ್ ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯದಲ್ಲಿ 56,432 ಹುದ್ದೆಗಳ ಬೃಹತ್ ನೇಮಕಾತಿ ಪ್ರಕ್ರಿಯೆ ಆರಂಭವಾಗುತ್ತಿರುವ ಈ ಸಂದರ್ಭದಲ್ಲಿ, ಒಳಮೀಸಲಾತಿ ರೋಸ್ಟರ್ ವ್ಯವಸ್ಥೆ ಪಾರದರ್ಶಕ ಹಾಗೂ ನ್ಯಾಯಸಮ್ಮತವಾಗಿ ಜಾರಿಯಾಗಬೇಕು. ಯಾವುದೇ ಸಮುದಾಯಕ್ಕೂ ಅನ್ಯಾಯವಾಗದಂತೆ ಸರ್ಕಾರ ಕಟ್ಟುನಿಟ್ಟಿನ ಮೇಲ್ವಿಚಾರಣೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
