Friday, April 10, 2026
Homeಜಿಲ್ಲಾ ಸುದ್ದಿಗಳುಎಲ್.ವಿ.ಕೆ. ವಸತಿ ನಿಲಯಗಳ ವಿದ್ಯಾರ್ಥಿಗಳಿಂದ ಮುಂಡಗೋಡ ಪೊಲೀಸ್ ಠಾಣೆ, ನ್ಯಾಯಾಲಯ ಮತ್ತು ಅಂಚೆ ಕಚೇರಿ ಭೇಟಿ

ಎಲ್.ವಿ.ಕೆ. ವಸತಿ ನಿಲಯಗಳ ವಿದ್ಯಾರ್ಥಿಗಳಿಂದ ಮುಂಡಗೋಡ ಪೊಲೀಸ್ ಠಾಣೆ, ನ್ಯಾಯಾಲಯ ಮತ್ತು ಅಂಚೆ ಕಚೇರಿ ಭೇಟಿ

ಮುಂಡಗೋಡ: *ಎಲ್.ವಿ.ಕೆ.ಯ 5 ವಸತಿನಿಲಯಗಳ ವಿದ್ಯಾರ್ಥಿಗಳಿಗಾಗಿ ದಿನಾಂಕ 06.04.2026 ರಿಂದ 09.04.2026 ರವರೆಗೆ ಶೈಕ್ಷಣಿಕ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಶಿಬಿರದ ಅಂಗವಾಗಿ *08.04.2026 ರಂದು* ವಿದ್ಯಾರ್ಥಿಗಳಿಗೆ ಮುಂಡಗೋಡ ಪೊಲೀಸ್ ಠಾಣೆ, ನ್ಯಾಯಾಲಯ ಹಾಗೂ ಅಂಚೆ ಕಚೇರಿಗೆ ಶೈಕ್ಷಣಿಕ ಭೇಟಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಮೊದಲಿಗೆ ವಿದ್ಯಾರ್ಥಿಗಳು ಮುಂಡಗೋಡ ಪೊಲೀಸ್ ಠಾಣೆಗೆ ಭೇಟಿ ನೀಡಿ ಸಿ.ಪಿ.ಐ. ಶ್ರೀ ರಂಗನಾಥ್ ಜಿ. ಅವರನ್ನು ಭೇಟಿಯಾದರು. ಅವರು ಪೊಲೀಸ್ ಇಲಾಖೆಯ ಕರ್ತವ್ಯ, ಕಾನೂನು ಸುವ್ಯವಸ್ಥೆ ಕಾಪಾಡುವ ಕ್ರಮಗಳು ಹಾಗೂ ಪೊಲೀಸ್ ಠಾಣೆಯ ಕಾರ್ಯವಿಧಾನದ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಠಾಣೆಯ ವಿವಿಧ ವಿಭಾಗಗಳನ್ನು ವೀಕ್ಷಿಸಲು ಅವಕಾಶ ಕಲ್ಪಿಸಿ, ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ನೀಡಿದರು. ಈ ಸಂದರ್ಭದಲ್ಲಿ ಮಕ್ಕಳಿಗೆ ಮಕ್ಕಳ ಹಕ್ಕುಗಳು, ಮಕ್ಕಳ ರಕ್ಷಣೆ, ಕಡ್ಡಾಯ ಶಿಕ್ಷಣ, ಲೈಂಗಿಕ ಶೋಷಣೆ ವಿರುದ್ಧದ ಕಾಯ್ದೆ (POCSO), ಬಾಲ್ಯವಿವಾಹ ತಡೆ ಕ್ರಮಗಳು ಮತ್ತು ಮೊಬೈಲ್ ಬಳಕೆಯ ನಿಯಂತ್ರಣ ಕುರಿತು ಜಾಗೃತಿ ಮೂಡಿಸಲಾಯಿತು.

ನಂತರ ವಿದ್ಯಾರ್ಥಿಗಳು ನ್ಯಾಯಾಲಯಕ್ಕೆ ಭೇಟಿ ನೀಡಿ ನ್ಯಾಯಾಂಗ ವ್ಯವಸ್ಥೆಯ ಕಾರ್ಯವಿಧಾನವನ್ನು ತಿಳಿದುಕೊಂಡರು. ನ್ಯಾಯಾಧೀಶರು, ವಕೀಲರು ಹಾಗೂ ಪ್ರಕರಣಗಳ ವಿಚಾರಣೆ ಪ್ರಕ್ರಿಯೆಯನ್ನು ವೀಕ್ಷಿಸುವ ಮೂಲಕ ವಿದ್ಯಾರ್ಥಿಗಳು ನ್ಯಾಯಾಲಯದ ಕಾರ್ಯವ್ಯವಸ್ಥೆಯ ಕುರಿತು ಅರಿವು ಪಡೆದರು.

ಮುಂದೆ ವಿದ್ಯಾರ್ಥಿಗಳು ಅಂಚೆ ಕಚೇರಿಗೆ ಭೇಟಿ ನೀಡಿದಾಗ, ಅಂಚೆ ವ್ಯವಸ್ಥೆಯ ಮಹತ್ವ, ಪತ್ರ ಬರೆಯುವ ಕೌಶಲ್ಯ, ಪಿನ್ ಕೋಡ್‌ನ ಉಪಯೋಗ, ಸ್ಟಾಂಪ್ ಬಳಕೆಯ ಉದ್ದೇಶ ಹಾಗೂ ಅಂಚೆ ಸಿಬ್ಬಂದಿಯ ಜವಾಬ್ದಾರಿಗಳ ಕುರಿತು ಮಾಹಿತಿ ನೀಡಲಾಯಿತು. ವಿದ್ಯಾರ್ಥಿಗಳು ಸ್ವತಃ ಪತ್ರ ಬರೆದು ಅಂಚೆ ಪೆಟ್ಟಿಗೆಯಲ್ಲಿ ಹಾಕುವ ಮೂಲಕ ಪ್ರಾಯೋಗಿಕ ಅನುಭವ ಪಡೆಯಬೇಕೆಂಬುದನ್ನು ತಿಳಿಸಲಾಯಿತು.

ಈ ಶೈಕ್ಷಣಿಕ ಭೇಟಿ ಕಾರ್ಯಕ್ರಮದಲ್ಲಿ ಎಲ್.ವಿ.ಕೆ.ಯ ಎಲ್ಲಾ 5 ವಸತಿನಿಲಯಗಳ ಪಾಲಕರು ಹಾಗೂ ಸಹಾಯಕ ನಿರ್ದೇಶಕರಾದ ಬ್ರ. ಕಿರಣ್ ರವರು ವಿದ್ಯಾರ್ಥಿಗಳೊಂದಿಗೆ ಭಾಗವಹಿಸಿ ಮಾರ್ಗದರ್ಶನ ನೀಡಿದರು.

ವರದಿಗಾರರು: ಲಕ್ಷ್ಮಣ ಮುಳೆ

ಹೆಚ್ಚಿನ ಸುದ್ದಿ